ಕಾರಾಗೃಹಗಳಲ್ಲಿ ನಿರಂತರ ಅಕ್ರಮ: ಸಿಸಿಟಿವಿ ಅಳವಡಿಕೆಗೆ ಹೈಕೋರ್ಟ್ ಮೌಖಿಕ ಆದೇಶ
ಬೆಂಗಳೂರು, ಫೆ. 23: ಎಲ್ಲ ಕಾರಾಗೃಹಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸದಿದ್ದರೆ ಅಲ್ಲಿನ ನಡೆಯುವ ಅಕ್ರಮಗಳು ನಿಲ್ಲುವುದಿಲ್ಲ. ಹಾಗಾಗಿ ಮೊದಲು ತುರ್ತಾಗಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಸರ್ಕಾರಕ್ಕೆ ಆದೇಶಿಸಿದೆ.
ಇತ್ತೀಚೆಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮಾದಕ ದ್ರವ್ಯಗಳ ಪತ್ತೆಯಾದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಕೀಲ ಧರ್ಮಪಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಸರಕಾರ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

ಆಗ ಸರ್ಕಾರಿ ವಕೀಲರು, ಇವೆಲ್ಲಾ ಕೇವಲ ಆರೋಪಗಳು, ಇವುಗಳಿಗೆ ಯಾವುದೇ ಆಧಾರವಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ ಎಂದರು.

ಇನ್ನೂ ಮುಂದುವರಿದು, ಸರ್ಕಾರ ಈಗಾಗಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎಡಿಜಿಪಿ ಮುರುಗನ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಅವರು ಕಾರಾಗೃಹಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಹೇಳಿದರು.
ಆಗ ನ್ಯಾಯಪೀಠ, ಸಿಸಿಟಿವಿ ಅಳವಡಿಸದಿದ್ದರೆ ಕಾರಾಗೃಹಗಳಲ್ಲಿನ ಅಕ್ರಮಗಳು ನಿಲ್ಲುವುದಿಲ್ಲ. ಹಾಗಾಗಿ ಸಿಸಿಟಿವಿ ಅಳವಡಿಸಬೇಕು ಎಂದು ಹೇಳಿತು. ಆಗ ಸರ್ಕಾರಿ ವಕೀಲರು, ಕಾರಾಗೃಹಗಳಲ್ಲಿನ ಸ್ಥಿತಿಗತಿ ಕುರಿತಂತೆ ಹೈಕೋರ್ಟ್ ಸ್ವತಃ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪಿಐಎಲ್ ನಲ್ಲಿ ಈಗಾಗಲೇ ಎಲ್ಲ ಕಾರಾಗೃಹಗಳಲ್ಲಿ ಸಿಸಿಟಿವಿ ಅಳವಡಿಕೆಗೆ ನಿರ್ದೇಶನ ನೀಡಿದೆ. ಆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.
ನ್ಯಾಯಪೀಠ, ಹಾಗಿದ್ದರೆ ಈ ಅರ್ಜಿಯನ್ನು ಆ ಪಿಐಎಲ್ ಜೊತೆ ಸೇರಿಸಿ ವಿಚಾರಣೆ ನಡೆಸೋಣ ಎಂದು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ದಿಢೀರ್ ಭೇಟಿ ಪರಿಶೀಲನೆ:
ಕಳೆದ ಜನವರಿ ತಿಂಗಳ ಅಂತ್ಯದಲ್ಲಿ ಪರಪ್ಪನ ಅಗ್ರಹಾರ ಕೇಂದ್ರದೊಳಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.
ಆ ನಂತರ ಮರುದಿನ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ. ಬಿ.ವೀರಪ್ಪ ನೇತೃತ್ವದ ಸಮಿತಿ ದಿಢೀರ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ದಿನ ಸರ್ಕಾರ ಕೂಡ ಕಾರಾಗೃಹದ ಅಕ್ರಮಗಳ ಬಗ್ಗೆ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿ ಮುರುಗನ್ ಅವರನ್ನು ನೇಮಕ ಮಾಡಿತ್ತು.











Click it and Unblock the Notifications