ತುಮಕೂರು, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು: ಅರಣ್ಯ ಭೂಮಿ ಬಳಕೆ ಅನುಮತಿ ಕೇಳಲು ದೆಹಲಿಗೆ: ಡಿಕೆಶಿ
ಬೆಂಗಳೂರು, ಮಾರ್ಚ್ 08: ಎತ್ತಿನಹೊಳೆ ಕಾಮಗಾರಿ ಸಲುವಾಗಿ ಅರಣ್ಯ ಭೂಮಿ ಬಳಕೆಗೆ ಅನುಮತಿ ಕೇಳಲು ಮಾರ್ಚ್ 18 ರಂದು ದೆಹಲಿಗೆ ತೆರಳುತ್ತಿದ್ದೇನೆ ಎಂದು ಅರಣ್ಯ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟ ಎಂದು ಹೇಳಲಾಗುತ್ತಿದೆ. 508 ಎಕರೆ 1 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿ ಬಳಕೆಗೆ ದೆಹಲಿಗೆ ತೆರಳಿ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಎತ್ತಿನಹೊಳೆ ಕಾಮಗಾರಿಗೆ ಬಳಸುವ ಅರಣ್ಯ ಭೂಮಿಗೆ ಬದಲಿಯಾಗಿ ಮತ್ತೊಂದು ಕಡೆ ಭೂಮಿ ನೀಡಲಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ಕೇಳಿದ ಕಾರಣಕ್ಕೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು, ನಾನು ಅಧಿಕಾರಿಗಳ ಸಭೆ ನಡೆಸಿದೆವು. ತುಮಕೂರು ಹಾಗೂ ಹಾಸನ ಜಿಲ್ಲಾಧಿಕಾರಿಗಳು ಎಲ್ಲೆಲ್ಲಿ ಸರ್ಕಾರ ಜಮೀನುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬಹುದೋ ಆ ಕೆಲಸವನ್ನು ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ತುಮಕೂರಿಗೆ ನೀರು ತಂದು, ಚಿಕ್ಕಬಳ್ಳಾಪುರಕ್ಕೆ ನೀರು ತರಲಾಗುವುದು. ಕೆಲಸ ನಿಂತು ಹೋಗಿರುವ ಕಾರಣಕ ಪ್ರತ್ಯೇಕ ಸಭೆ ನಡೆಸಲಾಯಿತು ಎಂದು ಹೇಳಿದರು.

ಬೆಂಗಳೂರು ನಗರದ ಅತಿ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸುಮಾರು 1 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 4 ಲಕ್ಷ ಕೋಟಿಗೂ ಮೀರಿದ ಬಜೆಟ್ ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಗೆ ಆದ್ಯತೆ ನೀಡಲಾಗಿದ್ದು, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ 8 ಸಾವಿರ ಕೋಟಿ ನೀಡಲಾಗಿದೆ. ರಾಜ್ಯ ಸರ್ಕಾರ ಸಾಲ ಮಾಡಿದೆ ಎನ್ನುವುದಾದರೆ ಕೇಂದ್ರ ಸರ್ಕಾರವೂ ಸಾಲ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದು ಕೇವಲ ಬಜೆಟ್ ಅಲ್ಲ. ರಾಜ್ಯದ ಎಲ್ಲಾ ವರ್ಗದ ಜನರು ಸಂತೋಷ ಪಡುವಂತಹ ಉಡುಗೊರೆ. 1989ರಿಂದ ಶಾಸಕನಾಗಿ ಆಯ್ಕೆಯಾಗಿದ್ದು, ನನ್ನ 36 ವರ್ಷಗಳ ರಾಜಕೀಯ ಪಯಣದಲ್ಲಿ ಇದು ಐತಿಹಾಸಿಕ, ಜನಪರವಾದ, ಎಲ್ಲ ವರ್ಗದ ಜನರಿಗೂ ನ್ಯಾಯ ಕೊಡಿಸುವ ದೂರದೃಷ್ಟಿಯ ಬಜೆಟ್ ಎಂದು ತಿಳಿಸಿದರು.
ಮುಸ್ಲಿಂ ಓಲೈಕೆ ಮಾಡುವ ಬಜೆಟ್ ಎಂಬ ಬಿಜೆಪಿ ನಾಯಕರ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಅವರು ಉತ್ತರಿಸಿ, ನಾವು ಎಲ್ಲಾ ವರ್ಗದವರನ್ನು ಓಲೈಕೆ ಮಾಡಬೇಕಲ್ಲವೇ. ಎಲ್ಲರನ್ನು ಸಮಾನವಾಗಿ ನೋಡಬೇಕು. ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಅನುದಾನನ ಸಿಕ್ಕಿದ್ದು, ನಿಮ್ಮ ಕನಸು ನನಸಾಗುತ್ತಿದೆ ಎಂದು ಕೇಳಿದಾಗ, "ಇದು ಕೇವಲ ನನ್ನ ಕನಸಲ್ಲ. ರಾಜ್ಯ ಹಾಗೂ ದೇಶದ ಕನಸು. ಕೇಂದ್ರ ಸರ್ಕಾರವಂತೂ ಬೆಂಗಳೂರಿಗೆ ಏನು ನೀಡಲಿಲ್ಲ. ನಮ್ಮ ಸರ್ಕಾರವಾದರೂ ನೀಡಬೇಕಲ್ಲವೇ ಎಂದು ತಿಳಿಸಿದರು.












Click it and Unblock the Notifications