ಡಿ.18ರ ಬಳಿಕ ಸರ್ಕಾರದ ದೊಡ್ಡ ಹಗರಣ ಬೆಳಕಿಗೆ : ಎಚ್ಡಿಕೆ
ಬೆಂಗಳೂರು, ಡಿಸೆಂಬರ್. 14 : 'ಮೈಸೂರು ಮಿನರಲ್ಸ್ ಕಂಪನಿಯಲ್ಲಿ ನಡೆದ ದೊಡ್ಡ ಭ್ರಷ್ಟಾಚಾರದ ಹಗರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಡಿಸೆಂಬರ್ 18 ರ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಈ ಸರ್ಕಾರದ ದೊಡ್ಡ ಹಗರಣವನ್ನು ದಾಖಲೆ ಸಮೇತ ಜನರ ಮುಂದಿಡುತ್ತೇನೆ' ಎಂದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಸಂಪತ್ತನ್ನು ಹೇಗೆ ಲೂಟಿ ಹೊಡೆದಿದ್ದಾರೆ? ಎಂಬುದು ಹಗರದ ಮೂಲಕದ ಬೆಳಕಿಗೆ ಬರಲಿದೆ' ಎಂದು ಕುಮಾರಸ್ವಾಮಿ ಹೇಳಿದರು.
'ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಗುಜರಾತ್‌ನಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ? ಎಂಬ ಬಗ್ಗೆ ನನಗೆ ಕುತೂಹಲವಿಲ್ಲ' ಎಂದರು.
'ಫಲಿತಾಂಶ ಪ್ರಕಟವಾದ ಬಳಿಕ ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಹೇಳಿಕೆಗಳನ್ನು ಕೆಲವರು ನೀಡುತ್ತಿದ್ದಾರೆ. ರಾಜ್ಯದಲ್ಲಿ ಮಹತ್ವದ ಬದಲಾವಣೆಯಾಗುವುದಂತೂ ಖಚಿತ' ಎಂದು ತಿಳಿಸಿದರು.
ಗುಜರಾತ್‌ನಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದೆ. ಡಿ.18ರ ಸೋಮವಾರ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications