'ವಕ್ಫ್ ಬೋರ್ಡಿನಲ್ಲಿ ಹಿಂದೂಗಳಿದ್ದಾರಾ? ಧಾರ್ಮಿಕ ದತ್ತಿ ಇಲಾಖೆಯಲ್ಲಿ ಯಾಕೆ ಅವರು?'
ಬೆಂಗಳೂರು, ಮಾರ್ಚ್ 24: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಹೇಳಿದ್ದರು. ಅದೇ ರೀತಿಯಲ್ಲಿ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ಬರುವ ವಿದ್ಯಮಾನಗಳು ಒಂದೊಂದಾಗಿ ಹುಟ್ಟಿಕೊಳ್ಳುತ್ತಲೇ ಇವೆ. ಇದಕ್ಕೆ ಈಗ ಮತ್ತೊಂದು ವಿಷಯ ಸೇರ್ಪಡೆಯಾಗಿದೆ.
ಕೋಮು ಸಾಮರಸ್ಯ ಕದಡುವ ಕೆಲಸಗಳಿಗೆ ಕರಾವಳಿಯ ಎರಡು ಜಿಲ್ಲೆಗಳು (ದಕ್ಷಿಣ ಕನ್ನಡ, ಉಡುಪಿ) ಮೂಲ ವೇದಿಕೆಯಾಗುತ್ತಿರುವುದು ಗಮನಿಸಬೇಕಾದ ವಿಚಾರ. ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಹಿಂದೂ ಮಹಿಳೆಯರಿಂದ ಮೀನು ಖರೀದಿಸಬಾರದು ಎನ್ನುವ ಮುಸ್ಲಿಂ ಮುಖಂಡರ ಫರ್ಮಾನಿಗೆ ಈಗ ಹಲವು ಆಯಾಮಗಳಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹಿಜಾಬ್ ವಿಚಾರ ದೇಶದೆಲ್ಲಡೆ ಸದ್ದು ಮಾಡುತ್ತಿದ್ದಂತಹ ಸಂದರ್ಭದಲ್ಲಿ, ಕರ್ನಾಟಕ ಮೂವರು ಸದಸ್ಯರ ಪೀಠ ಸುದೀರ್ಘ ವಿಚಾರಣೆ ನಡೆಸಿ ತೀರ್ಪನ್ನು ನೀಡಿತ್ತು. ಈ ತೀರ್ಪಿಗೆ ವಿರುದ್ದವಾಗಿ ಮುಸ್ಲಿಂ ಸಮುದಾಯ ಕರೆದಿದ್ದ ಕರ್ನಾಟಕ ಬಂದ್ ನಿಂದಾಗಿ ಹಲವು ಗಂಭೀರ ಸಮಸ್ಯೆಗಳು ಆರಂಭವಾಗಲಾರಂಭಿಸಿದೆ.
ಹಿಜಾಬ್ ನಂತೆ, ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅನುಮತಿ ನೀಡಲು ನಿರಾಕರಿಸುವ ಮೂಲಕ, ಈ ಸಮಸ್ಯೆಗೂ ಉಡುಪಿ ಜಿಲ್ಲೆ ಪ್ರಥಮವಾಗಿ ನಾಂದಿ ಹಾಡಿತು. ಈಗ, ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರರನ್ನು ತೆಗೆದು ಹಾಕಬೇಕು ಎನ್ನುವ ಧ್ವನಿ ಜೋರಾಗಿ ಏಳಲಾರಂಭಿಸಿದೆ.

ವಕ್ಫ್ ಬೋರ್ಡ್ ಕೂಡಾ ಸರಕಾರದ ಸ್ವಾಮ್ಯತೆಗೆ ಬರುತ್ತದೆ
"ವಕ್ಫ್ ಬೋರ್ಡ್ ಕೂಡಾ ಸರಕಾರದ ಸ್ವಾಮ್ಯತೆಗೆ ಬರುತ್ತದೆ, ಅಲ್ಲಿ ಯಾರಾದರೂ ಮುಸ್ಲಿಂಯೇತರರು ಇದ್ದಾರಾ, ಹೀಗಿರುವಾಗ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರರು ಯಾಕಿರಬೇಕು, ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು"ಎಂದು ರಾಜ್ಯ ಮುಜರಾಯಿ ದೇವಾಲಯದ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಎಚ್ಚರಿಸುವ ಮೂಲಕ, ನಿರ್ಬಂಧದ ಪರ್ವ ಇನ್ನೊಂದು ಮಜಲಿಗೆ ಅಂಟಿಕೊಂಡಿದೆ.

ಧಾರ್ಮಿಕ ದತ್ತಿ ಇಲಾಖೆಗೆ 2002ರಲ್ಲಿ ಕಾನೂನನ್ನು ತರಲಾಯಿತು
ಧಾರ್ಮಿಕ ದತ್ತಿ ಇಲಾಖೆಗೆ 2002ರಲ್ಲಿ ಕಾನೂನನ್ನು ತರಲಾಯಿತು, ಅದರಲ್ಲಿ ಸೆಕ್ಷನ್ 4.5ರ ಪ್ರಕಾರ, ಹಿಂದೂಯೇತರರಿಗೆ ಅಂಗಡಿ ಮಳಿಗೆ ತೆರೆಯಲು ಗುತ್ತಿಗೆ ನೀಡಲು ಅವಕಾಶವಿಲ್ಲ ಎಂದು ಆದೇಶಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನನ್ನು ಜಾರಿಗೆ ತರಬೇಕು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೇ ಈ ಕಾನೂನಿಗೆ ತಿದ್ದುಪಡಿಯನ್ನು ತರಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರರು ಇರಬಾರದು ಎಂದು ಮನವಿಯನ್ನು ನೀಡಿದ್ದೇವೆ"ಎಂದು ಶ್ರೀವತ್ಸ ಆಗ್ರಹಿಸಿದ್ದಾರೆ.

ಇಲಾಖೆಯಲ್ಲಿ ಅವರು ಯಾಕೆ ಇರಬೇಕು ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ
"ಈ ಹಿಂದೆಯೂ ಈ ಬಗ್ಗೆ ಮನವಿ ಮಾಡಿದ್ದೆವು, ಕೆಲವರನ್ನು ವರ್ಗಾವಣೆಯನ್ನೂ ಮಾಡಲಾಗಿದೆ. ಮುಜರಾಯಿ ಇಲಾಖೆ ಹಿಂದೂಗಳಿಗೆ ಇರಬೇಕು, ಇಲಾಖೆಯಲ್ಲಿ ಇನ್ನೂ ಹಿಂದೂಯೇತರರು ಇದ್ದಾರೆ. ಅವರನ್ನು ಇನ್ನೂ ವರ್ಗಾವಣೆಯನ್ನು ಮಾಡುತ್ತಿಲ್ಲ. ವಕ್ಫ್ ಬೋರ್ಡಿನಲ್ಲಿ ಒಬ್ಬರೇ ಒಬ್ಬರು ಹಿಂದೂಗಳು ಇಲ್ಲ, ಹೀಗಿರುವಾಗ ನಮ್ಮ ದೇವಾಲಯ ಮತ್ತು ಇಲಾಖೆಯಲ್ಲಿ ಅವರು ಯಾಕೆ ಇರಬೇಕು"ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.
Recommended Video

ಲಂಚದ ಆಸೆಗೆ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ
"ಮುಜರಾಯಿ ಇಲಾಖೆಯ ಕೆಲವು ಅಧಿಕಾರಿಗಳು ಲಂಚದ ಆಸೆಗೆ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲಾಖೆಗೆ ಬರಬೇಕಾಗಿರುವ ಕೋಟ್ಯಾಂತರ ಹಣ ಇಂತಹ ಅಧಿಕಾರಿಗಳಿಂದ ಸೋರಿಕೆಯಾಗುತ್ತಿದೆ. ಈಗ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಲು ಸರಕಾರ ಚಿಂತಿಸುತ್ತಿದೆ. ಇದರಿಂದ ದೇವಾಲಯದ ಕೋಟ್ಯಾಂತರ ರೂಪಾಯಿ ಆಸ್ತಿಗಳು ಪರಭಾರೆಯಾಗಲಿದೆ. ಹಿಂದೂಯೇತರರನ್ನು ಇಲಾಖೆಯಿಂದ ವರ್ಗಾಯಿಸಬೇಕೆಂದು ನಾವು ಮತ್ತೆ ಇಲಾಖೆಗೆ ಮನವಿಯನ್ನು ಮಾಡುತ್ತಿದ್ದೇವೆ"ಎಂದು ಶ್ರೀವತ್ಸ ಆಗ್ರಹಿಸಿದ್ದಾರೆ.












Click it and Unblock the Notifications