R.Ashok: ರಸ್ತೆ, ಚರಂಡಿ ಬೇಡ ಅಂದ ಮೇಲೆ ತುಮಕೂರುವರೆಗೆ ಮೆಟ್ರೋ ಯಾಕೆ ಬೇಕು?
"ಗ್ಯಾರಂಟಿಗಳನ್ನು ನಿಲ್ಲಿಸಿ, ರಸ್ತೆ ಅಥವಾ ಚರಂಡಿ ನಿರ್ಮಾಣ ಮಾಡುವುದರಿಂದ ಜನ ಉದ್ಧಾರ ಆಗ್ತಾರಾ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ವಿರೋಧಕ್ಕೆ ಕಾರಣವಾಗಿದೆ. ತುಮಕೂರಿನ ಕಾರ್ಯಕ್ರಮದಲ್ಲಿ ಪರಮೇಶ್ವರ್ ಈ ರೀತಿ ಮಾತನಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಸ್ತೆ ಚರಂಡಿ ಬೇಡ ಎಂದ ಮೇಲೆ ತುಮಕೂರರಿನವರೆಗೂ ಮೆಟ್ರೋ ಯಾಕೆ ಬೇಕು? ಎಂದು ಕೇಳಿದ್ದಾರೆ.
ಈ ಬಗ್ಗೆ ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ, ಚರಂಡಿ ನಿರ್ಮಾಣದಿಂದ ಜನ ಉದ್ಧಾರ ಆಗ್ತಾರಾ? ಎಂದಿರುವ ಸಚಿವ ಪರಮೇಶ್ವರ್ ಅವರೇ ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ರಸ್ತೆ, ಚರಂಡಿ ಬೇಡ ಅಂದ ಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ? ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ, ಮೆಟ್ರೋ ಕಾಮಗಾರಿಯ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ ಎಂದಿದ್ದಾರೆ. ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ. ಇದಂತೂ ಗ್ಯಾರಂಟಿ ಎಂದು ತಿರುಗೇಟು ನೀಡಿದ್ದಾರೆ.
ತುಮಕೂರು ಮೆಟ್ರೋಗೆ ವಿರೋಧ
ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಸಂಪರ್ಕಕ್ಕೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಈ ಯೋಜನೆಗೆ ಈಗಾಗಲೇ ಡಿಪಿಆರ್‌ಗೆ ಟೆಂಡರ್ ಕೂಡ ಕರೆದಿದೆ. ಸದ್ಯ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೆ ರೈಲು ಸೇವೆ ಲಭ್ಯವಿದೆ. ಸದ್ಯ ಮಾದಾವರದಿಂದ ತುಮಕೂರಿಗೆ 59.6 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ಕರ್ನಾಟಕ ಸರ್ಕಾರ ಕಳೆದ ಬಜೆಟ್‌ನಲ್ಲೇ ಘೋಷಣೆ ಮಾಡಿತ್ತು. ಅಲ್ಲದೆ ಇದನ್ನು ಮೊದಲ ಅಂತರ್ ನಗರ ಮೆಟ್ರೋ ಯೋಜನೆ ಎಂದು ಕರೆಯಲಾಗಿದೆ.
ತುಮಕೂರು-ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಬಿಎಂಆರ್‌ಸಿಎಲ್ ಡಿಪಿಆರ್ ಸಿದ್ಧಪಡಿಸಿದೆ. ಆದರೆ ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ವಿರೋಧವೂ ವ್ಯಕ್ತವಾಗಿದೆ. ತುಮಕೂರಿಗೆ ಮೆಟ್ರೋ ಬದಲಿಗೆ ಉಪನಗರ ರೈಲುಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ. ಮೆಟ್ರೋ ಯೋಜನೆ ಅವೈಜ್ಞಾನಿಕ, ದುಬಾರಿ ಮತ್ತು ನಗರ ಯೋಜನೆ ದುಃಸ್ವಪ್ನ, ಇದರಿಂದ ಅನುಕೂಲವಾಗುವುದು ರಿಯಲ್ ಎಸ್ಟೇಟ್‌ಗೆ ಮಾತ್ರ ಎಂದು ಅವರು ಟೀಕಿಸಿದ್ದಾರೆ.












Click it and Unblock the Notifications