ಮಳೆಗಾಲದಲ್ಲೂ ಬಿಸಿ ಹೆಚ್ಚಾಗಿರುವುದು ಇದೇ ಕಾರಣಕ್ಕೆ
ರಾಜ್ಯದಲ್ಲಿ ಇತ್ತೀಚೆಗೆ ಮಳೆ ಸುರಿಯುತ್ತಿದ್ದರೂ ಕಳೆದೆರಡು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಕಂಡುಬರುತ್ತಿದೆ. ಸುಡುಬಿಸಿಲಿನ ಅನುಭವದೊಂದಿಗೆ ಬೇಸಿಗೆಯಂತಹ ವಾತಾವರಣ ಕಂಡು ಜನ ಕಂಗಾಲಾಗಿದ್ದಾರೆ. ಬಿಸಿಗಾಳಿಯಿಂದ ಸೆಕೆ ಕೂಡ ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.
ಈ ಹವಾಮಾನದ ಬದಲಾವಣೆ ಬಗ್ಗೆ ಹವಾಮಾನ ಇಲಾಖೆ ತಜ್ಞರು ಕಾರಣ ಬಿಚ್ಚಿಟ್ಟಿದ್ದಾರೆ. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದ ಮಳೆ ಇಲ್ಲದಿರುವುದರಿಂದಲೇ ಬಿಸಿಲಿನ ವಾತಾವರಣ ಸೃಷ್ಟಿಯಾಗಿದೆ. ಗಾಳಿಯಲ್ಲೂ ನೀರಿನ ತೇವಾಂಶ ಇಲ್ಲದ ಕಾರಣ ರಾಜ್ಯದ ಹಲವೆಡೆ ಬಿಸಿ ಗಾಳಿ ಬೀಸುತ್ತಿದೆ. ಇದರಿಂದಲೇ ಬೇಸಿಗೆಯ ವಾತಾವರಣವಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಈ ಅವಧಿಯಲ್ಲಿ ಮಳೆ ಹೆಚ್ಚಾಗಿರುತ್ತದೆ ಹಾಗೂ ವಾತಾವರಣ ಕೂಡ ಬಹುತೇಕ ತಂಪಾಗಿರುತ್ತದೆ. ಆದರೆ, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಏರಿಕೆಯಾಗಿದೆ. ಇದರಿಂದ ಬಿಸಿಲು ಕೂಡ ಹೆಚ್ಚಾಗಿದ್ದು, ಜನ ಬಸವಳಿದಿದ್ದಾರೆ.
ರಾಜ್ಯದಲ್ಲಿ ಕೆಲವೆಡೆ ಮಾತ್ರ ಮಳೆಯಾಗುತ್ತಿದೆ. ಆದರೆ ವಾಡಿಕೆಯಂತೆ ಈ ಬಾರಿ ಮಳೆಯಾಗುತ್ತಿಲ್ಲ. ಈ ಕಾರಣದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಳೆ ಕೊರತೆಯಿಂದ ಬೇಸಿಗೆಯಲ್ಲಿ ಸುಡುವಂತೆಯೇ ಬಿಸಿ ಈಗಲೂ ಕಾಡುತ್ತಿದೆ. ಇನ್ನೂ ಸ್ವಲ್ಪದಿನಗಳವರೆಗೆ ಇದೇ ರೀತಿ ತಾಪಮಾನ ಇರಲಿದೆ ಎಂದು ಹೇಳಿದೆ.
ಈ ವರ್ಷ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ವಿಜಯನಗರ ಒಳಗೊಂಡಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಹಾಗಾಗಿ, ಈ ಜಿಲ್ಲೆಗಳಲ್ಲಿಯೂ ಬಿಸಿಲು ಜನರನ್ನು ಸುಡುತ್ತಿದೆ.

ಕಳೆದ ವರ್ಷ ರಾಜ್ಯದಲ್ಲಿ ಬರಗಾಲ ಹೆಚ್ಚಾಗಿತ್ತು. ಈ ವೇಳೆ ತಾಪಮಾನ ಕೂಡ ಏರಿಕೆಯಾಗಿತ್ತು. ಈ ಬಾರಿಯೂ ಅದೇ ವಾತಾವರಣ ಕಂಡುಬರುತ್ತಿದೆ ಎನ್ನಲಾಗಿದೆ. ಜೂನ್ 1ರಿಂದ ಜುಲೈ ಸೆಪ್ಟಂಬರ್ 30ರವರೆಗೆ ಮುಂಗಾರು ಅವಧಿಯಾಗಿದೆ. ಸದ್ಯ ಮುಂಗಾರು ಮಳೆ ಅಂತ್ಯಗೊಂಡಿದ್ದು, ಹಿಂಗಾರು ಮಳೆ ಶುರುವಾಗಲಿದೆ. ಇನ್ಮುಂದೆ ಚಳಿ ಸಹಿತ ಆಗಾಗ ಗುಡುಗು, ಮಿಂಚು ಸಹಿತ ರಾಜ್ಯದಲ್ಲಿ ಭಾರೀ ಮಳೆಯೂ ಆಗುವ ಸಾಧ್ಯತೆ ಇದೆ.
ಹವಾಮಾನ ಮುನ್ಸೂಚನೆಯ ಪ್ರಕಾರ ಅಕ್ಟೋಬರ್ 1ರಿಂದ ಹಿಂಗಾರು ಮಳೆ ಸುರಿಸುವ ಮಾರುತಗಳು ಸಕ್ರಿಯಗೊಳ್ಳುತ್ತವೆ. ಸದ್ಯದ ಮುನ್ಸೂಚನೆ ನೋಡಿದರೆ, ಮುಂದಿನ ಮೂರು ದಿನ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಿಸಿಲು ಆರ್ಭಟಿಸುತ್ತಲೇ ಇದ್ದು, ಮಳೆ ಹೆಚ್ಚಾದಂತೆ ವಾತಾವರಣ ತಂಪಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳೀಯ ಮುನ್ಸೂಚನೆಯಂತೆ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಸೂಚನೆ ನೀಡಿದೆ.












Click it and Unblock the Notifications