ಕಾಫಿ ಕುಡಿಯದಿದ್ದರೂ ಜನರು ಗಂಟೆಗಟ್ಟಲೆ ಕಾಫಿ ಶಾಪ್‌ನಲ್ಲಿ ಏಕೆ ಕೂರುತ್ತಾರೆ? ಮನಸ್ಸಿಗೆ ಅಲ್ಲಿ ಏನ್ ಸಿಗುತ್ತೆ?
ಕೈಯಲ್ಲಿ ಲ್ಯಾಪ್‌ಟಾಪ್. ಮುಂದೆ ಒಂದು ಕಪ್ ಕಾಫಿ. ಸುತ್ತಮುತ್ತ ಜನರ ಮಾತು, ಕಪ್‌ಗಳ ಸದ್ದು, ಕಾಫಿ ಮಶೀನ್‌ನ ಸದ್ದು. ಯಾವುದೇ ಅರ್ಜೆಂಟ್ ಕೆಲಸವಿಲ್ಲ. ಯಾರನ್ನೂ ಭೇಟಿಯಾಗಬೇಕಿಲ್ಲ. ಕೆಲವೊಮ್ಮೆ ಆರ್ಡರ್ ಮಾಡಿದ ಕಾಫಿಯನ್ನೂ ಪೂರ್ತಿ ಕುಡಿಯುವುದಿಲ್ಲ. ಆದರೂ ಗಂಟೆಗಟ್ಟಲೆ ಅಲ್ಲೇ ಕುಳಿತುಕೊಳ್ಳುತ್ತಾರೆ.
ಇದು ಕೇವಲ ಕಾಫಿ ಪ್ರಿಯರ ಅಭ್ಯಾಸವೇ? ಅಥವಾ ಕಾಫಿ ಶಾಪ್‌ನ ವಾತಾವರಣದ ಹಿಂದೆ ಮನಸ್ಸಿಗೆ ಸಂಬಂಧಿಸಿದ ಯಾವುದೋ ಕಾರಣವಿದೆಯೇ?

ಮನೋವಿಜ್ಞಾನ ಮತ್ತು ಪರಿಸರ ಮನೋವಿಜ್ಞಾನದ ಅಧ್ಯಯನಗಳು ಹೇಳುವ ಪ್ರಕಾರ, ಕಾಫಿ ಶಾಪ್‌ನಲ್ಲಿ ಸಿಗುವುದು ಕೇವಲ ಕಾಫಿಯಲ್ಲ. ಅಲ್ಲಿ ಸಿಗುವ ವಾತಾವರಣ, ಸುತ್ತಲಿನ ಜನರ ಸಣ್ಣಪುಟ್ಟ ಸದ್ದು, ಅಪರಿಚಿತರ ಶಾಂತ ಉಪಸ್ಥಿತಿ ಮತ್ತು ಮನೆಯಲ್ಲಾಗಲಿ ಕಚೇರಿಯಲ್ಲಾಗಲಿ ಸಿಗದ ಒಂದು ರೀತಿಯ ಮಾನಸಿಕ ಸ್ವಾತಂತ್ರ್ಯ ಕೂಡ ಜನರನ್ನು ಅಲ್ಲಿಗೆ ಸೆಳೆಯಬಹುದು.
ಕಾಫಿ ಶಾಪ್ ಏಕೆ ವಿಶೇಷ?
ಸಮಾಜಶಾಸ್ತ್ರಜ್ಞ ರೇ ಓಲ್ಡೆನ್‌ಬರ್ಗ್ ಇಂತಹ ಸ್ಥಳಗಳನ್ನು 'ಥರ್ಡ್ ಪ್ಲೇಸ್' ಎಂದು ಕರೆದಿದ್ದಾರೆ. ಅಂದರೆ ಮನೆ ಮೊದಲ ಸ್ಥಳ, ಕೆಲಸದ ಜಾಗ ಎರಡನೇ ಸ್ಥಳ. ಇವೆರಡರ ನಡುವಿನ, ಆದರೆ ದಿನನಿತ್ಯದ ಬದುಕಿನಲ್ಲಿ ಮಾನಸಿಕವಾಗಿ ಮಹತ್ವ ಹೊಂದಿರುವ ಸ್ಥಳವೇ ಮೂರನೇ ಸ್ಥಳ. ಕಾಫಿ ಶಾಪ್‌ಗಳು, ಪುಸ್ತಕದಂಗಡಿಗಳು, ನೆರೆಹೊರೆಯ ಸಣ್ಣ ಕೂಟದ ಜಾಗಗಳು ಇದಕ್ಕೆ ಉದಾಹರಣೆ.
1989ರಲ್ಲಿ ಪ್ರಕಟವಾದ ʼThe Great Good Placeʼ ಕೃತಿಯಲ್ಲಿ ಓಲ್ಡೆನ್‌ಬರ್ಗ್ ವಿವರಿಸಿದಂತೆ, ಇಂತಹ ಸ್ಥಳಗಳು ಯಾವುದೇ ದೊಡ್ಡ ಬದ್ಧತೆಯಿಲ್ಲದೆ, ತಾವೂ ಗುಂಪಿಗೆ ಸೇರಿದವರು ಎಂಬ ಭಾವನೆಯನ್ನು ಜನರಿಗೆ ನೀಡುತ್ತವೆ. ಕಾಫಿ ಶಾಪ್‌ನಲ್ಲಿ ಕುಳಿತಾಗ ಸುತ್ತಮುತ್ತ ಜನರಿರುತ್ತಾರೆ. ಆದರೆ ಅವರೊಂದಿಗೆ ಮಾತನಾಡಲೇಬೇಕು ಎಂಬ ಒತ್ತಡ ಇರುವುದಿಲ್ಲ. ಒಬ್ಬರೇ ಕುಳಿತುಕೊಂಡರೂ ಸಂಪೂರ್ಣ ಏಕಾಂಗಿ ಎನಿಸುವುದಿಲ್ಲ. ಇದು ಮನುಷ್ಯನ ಸಹಜ ಸಾಮಾಜಿಕ ಅಗತ್ಯಕ್ಕೆ ಸಂಬಂಧಿಸಿದೆ.
ಮನೋವಿಜ್ಞಾನಿಗಳಾದ ರಾಯ್ ಬೌಮಿಸ್ಟರ್ ಮತ್ತು ಮಾರ್ಕ್ ಲಿಯರಿ 1995ರಲ್ಲಿ ಪ್ರಕಟಿಸಿದ 'The Need to Belong' ಅಧ್ಯಯನದಲ್ಲಿ ಮನುಷ್ಯರಿಗೆ ಇತರರೊಂದಿಗೆ ಕನಿಷ್ಠ ಮಟ್ಟದಲ್ಲಾದರೂ ಸಾಮಾಜಿಕ ಸಂಪರ್ಕ ಹೊಂದುವ ಮೂಲಭೂತ ಅಗತ್ಯವಿದೆ ಎಂದು ವಿವರಿಸಿದ್ದಾರೆ. ಹೀಗಾಗಿ ಕಾಫಿ ಶಾಪ್‌ನಲ್ಲಿ ಅಪರಿಚಿತರ ನಡುವೆ ಸುಮ್ಮನೆ ಕುಳಿತುಕೊಳ್ಳುವುದೂ ಕೆಲವೊಮ್ಮೆ ಮನಸ್ಸಿಗೆ ಒಂದು ರೀತಿಯ ಸಾಮಾಜಿಕ ಸಂಪರ್ಕದ ಅನುಭವ ನೀಡಬಹುದು.
ಕಾಫಿ ಶಾಪ್‌ನ ಸದ್ದುಗಳು
ಕಾಫಿ ಶಾಪ್‌ನಲ್ಲಿ ಸಂಪೂರ್ಣ ಮೌನವಿರುವುದಿಲ್ಲ. ಯಾರೋ ಮಾತನಾಡುತ್ತಿರುತ್ತಾರೆ. ಇನ್ನೊಬ್ಬರು ನಗುತ್ತಿರುತ್ತಾರೆ. ಕಪ್‌ಗಳ ಸದ್ದು ಕೇಳಿಸುತ್ತಿರುತ್ತದೆ. ಕಾಫಿ ಮಶೀನ್‌ನ ಶಬ್ದವೂ ಇರುತ್ತದೆ. ಸಾಮಾನ್ಯವಾಗಿ ಇಂತಹ ಸದ್ದುಗಳು ಗಮನವನ್ನು ಬೇರೆಡೆ ಸೆಳೆಯಬೇಕು ಎಂದು ನಾವು ಭಾವಿಸುತ್ತೇವೆ. ಆದರೆ ಕೆಲವು ಅಧ್ಯಯನಗಳು ಇದಕ್ಕೆ ವಿರುದ್ಧವಾದ ಸಂಗತಿಯನ್ನು ಸೂಚಿಸುತ್ತವೆ.
ಮಾರ್ಕೆಟಿಂಗ್ ಸಂಶೋಧಕ ರವಿ ಮೆಹ್ತಾ ಮತ್ತು ಅವರ ಸಹೋದ್ಯೋಗಿಗಳು 2012ರಲ್ಲಿ ನಡೆಸಿದ ಅಧ್ಯಯನದಲ್ಲಿ ಮಧ್ಯಮ ಪ್ರಮಾಣದ ಹಿನ್ನೆಲೆ ಶಬ್ದವು ಸೃಜನಶೀಲ ಚಿಂತನೆಗೆ ಸಹಾಯ ಮಾಡಬಹುದು ಎಂದು ಕಂಡುಬಂದಿತ್ತು. ಸುಮಾರು 70 ಡೆಸಿಬಲ್‌ನಷ್ಟು ಶಬ್ದ, ಅಂದರೆ ಬ್ಯುಸಿ ಕಾಫಿ ಶಾಪ್‌ನಲ್ಲಿ ಕೇಳಿಸುವಂತಹ ಸದ್ದು, ಮೌನ ಅಥವಾ ಅತಿಯಾದ ಗದ್ದಲಕ್ಕಿಂತ ಕೆಲವು ಸೃಜನಶೀಲ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ನೀಡಿತ್ತು.
ಇದಕ್ಕೆ ಒಂದು ವಿವರಣೆ ಏನೆಂದರೆ, ಸ್ವಲ್ಪ ಮಟ್ಟಿನ ಹಿನ್ನೆಲೆ ಸದ್ದು ನಮ್ಮ ಮೆದುಳನ್ನು ಒಂದೇ ವಿಷಯದ ಮೇಲೆ ಅತಿಯಾಗಿ ಬಿಗಿಯಾಗಿ ಕೇಂದ್ರೀಕರಿಸುವುದರಿಂದ ದೂರವಿಟ್ಟು, ವಿಚಾರಗಳನ್ನು ಸ್ವಲ್ಪ ವಿಶಾಲವಾಗಿ ಮುಟ್ಟಲು ನೆರವಾಗಬಹುದು.
ಅದಕ್ಕಾಗಿಯೇ ಕೆಲವರಿಗೆ ಮನೆಯಲ್ಲಿ ಸಂಪೂರ್ಣ ಮೌನದಲ್ಲಿರುವುದಕ್ಕಿಂತ ಕಾಫಿ ಶಾಪ್‌ನಲ್ಲಿ ಕುಳಿತು ಬರೆಯುವುದು, ಓದುವುದು ಅಥವಾ ಯೋಚಿಸುವುದು ಸುಲಭವಾಗಬಹುದು. ಅಲ್ಲಿ ಮೌನವಿರೋಲ್ಲ. ಆದರೆ ಗದ್ದಲವೂ ಅತಿಯಾಗಿರುವುದಿಲ್ಲ. ಈ ಮಧ್ಯಮ ವಾತಾವರಣವೇ ಕೆಲವರಿಗೆ 'ಝೋನ್'ಗೆ ಹೋಗಲು ಸಹಾಯ ಮಾಡಬಹುದು.
ಮನಸ್ಸಿಗೆ ಬೇಕಾದ 'ಸಾಫ್ಟ್ ಫ್ಯಾಸಿನೇಷನ್'
ಕಾಫಿ ಶಾಪ್‌ನಲ್ಲಿ ಕುಳಿತಾಗ ನಮಗೆ ಮತ್ತೊಂದು ವಿಚಿತ್ರ ಅನುಭವವಾಗುತ್ತದೆ. ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದು ಗಮನಕ್ಕೆ ಬರುತ್ತಿರುತ್ತದೆ. ಆದರೆ ಪ್ರತಿಯೊಂದು ವಿಷಯವನ್ನೂ ಗಮನವಿಟ್ಟು ವಿಶ್ಲೇಷಿಸುವ ಅಗತ್ಯವಿರುವುದಿಲ್ಲ. ಮನೋವಿಜ್ಞಾನದಲ್ಲಿ ಇದನ್ನು 'ಸಾಫ್ಟ್ ಫ್ಯಾಸಿನೇಷನ್' ಎಂದು ಕರೆಯಲಾಗುತ್ತದೆ.
ಪರಿಸರ ಮನೋವಿಜ್ಞಾನಿಗಳಾದ ರೇಚಲ್ ಮತ್ತು ಸ್ಟೀಫನ್ ಕಪ್ಲನ್ ಅಭಿವೃದ್ಧಿಪಡಿಸಿದ 'Attention Restoration Theory' ಪ್ರಕಾರ, ಹೆಚ್ಚು ಮಾನಸಿಕ ಶ್ರಮ ಬೇಡದೆ ನಮ್ಮ ಗಮನವನ್ನು ಸೌಮ್ಯವಾಗಿ ಹಿಡಿದಿಟ್ಟುಕೊಳ್ಳುವ ವಾತಾವರಣವು ಮಾನಸಿಕ ದಣಿವಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಬಹುದು.
1989ರಲ್ಲಿ ಪ್ರಕಟವಾದ ʼThe Experience of Natureʼ ಕೃತಿಯಲ್ಲಿ ಕಪ್ಲನ್ ದಂಪತಿ ಇಂತಹ ಪುನಶ್ಚೇತನಕಾರಿ ಪರಿಸರಗಳ ಬಗ್ಗೆ ವಿವರಿಸಿದ್ದಾರೆ. ದಿನವಿಡೀ ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು, ನಿರಂತರವಾಗಿ ನಿರ್ಧಾರ ತೆಗೆದುಕೊಳ್ಳುವುದು, ಓದುವುದು ಅಥವಾ ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಮನಸ್ಸು ದಣಿಯುತ್ತದೆ.
ಅಂತಹ ಸಂದರ್ಭದಲ್ಲಿ ಕಾಫಿ ಶಾಪ್‌ನಲ್ಲಿರುವ ಸಣ್ಣಪುಟ್ಟ ಚಲನೆಗಳು, ಹಿನ್ನೆಲೆ ಸದ್ದು ಮತ್ತು ಜನರ ಉಪಸ್ಥಿತಿ ನಮ್ಮ ಗಮನವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳದೆ, ಮನಸ್ಸನ್ನು ಹಗುರವಾಗಿ ತೊಡಗಿಸಿಕೊಂಡಿರಿಸಬಹುದು. ಹೀಗಾಗಿ, 'ಕಾಫಿ ಶಾಪ್‌ನಲ್ಲಿ ನನಗೆ ಹೆಚ್ಚು ಕೆಲಸ ಆಗುತ್ತದೆ' ಎನ್ನುವ ಅನುಭವದ ಹಿಂದೆ ಕಾಫಿಗಿಂತ ವಾತಾವರಣದ ಪಾತ್ರವೇ ಹೆಚ್ಚಿರಬಹುದು.
ಅಪರಿಚಿತರ ನಡುವೆ ಕುಳಿತುಕೊಳ್ಳುವ ನೆಮ್ಮದಿ
ಕಾಫಿ ಶಾಪ್‌ನ ಮತ್ತೊಂದು ವಿಶೇಷತೆ ಎಂದರೆ ಅಲ್ಲಿ ಸಾಮಾಜಿಕ ಸಂಪರ್ಕವಿರುತ್ತದೆ. ಆದರೆ ಆ ಸಂಪರ್ಕಕ್ಕೆ ಯಾವುದೇ ದೊಡ್ಡ ಜವಾಬ್ದಾರಿ ಇರುವುದಿಲ್ಲ. ನೀವು ಅಲ್ಲಿ ಯಾರೊಂದಿಗೂ ಮಾತನಾಡದೇ ಇರಬಹುದು. ಆದರೂ ನಿಮ್ಮ ಸುತ್ತ ಜನರಿದ್ದಾರೆ ಎಂಬ ಅರಿವು ಇರುತ್ತದೆ. ಬರಿಸ್ಟಾ ಜೊತೆಗಿನ ಸಣ್ಣ ಮಾತುಕತೆ, ಪಕ್ಕದ ಟೇಬಲ್‌ನಲ್ಲಿ ಪ್ರತಿದಿನ ಕಾಣಿಸುವ ವ್ಯಕ್ತಿ, ಪರಿಚಿತ ವಾತಾವರಣ ಇವೆಲ್ಲವೂ ಮನಸ್ಸಿಗೆ ಒಂದು ರೀತಿಯ ಸಂಪರ್ಕದ ಭಾವನೆ ನೀಡಬಹುದು.
ಮನೋವಿಜ್ಞಾನಿಗಳಾದ ಗಿಲಿಯನ್ ಸ್ಯಾಂಡ್‌ಸ್ಟ್ರೋಮ್ ಮತ್ತು ಎಲಿಜಬೆತ್ ಡನ್ 2014ರಲ್ಲಿ ನಡೆಸಿದ ಅಧ್ಯಯನವು ಅಪರಿಚಿತರೊಂದಿಗೆ ನಡೆಯುವ ಸಣ್ಣಪುಟ್ಟ ಸಾಮಾಜಿಕ ಸಂವಹನಗಳೂ ನೆಮ್ಮದಿಯ ಭಾವನೆಗೆ ಸಹಾಯ ಮಾಡಬಹುದು ಎಂದು ಸೂಚಿಸಿತ್ತು.
ಅಂದರೆ, ಕಾಫಿ ಶಾಪ್‌ನಲ್ಲಿ ಗಂಟೆಗಟ್ಟಲೆ ಕುಳಿತಿರುವ ವ್ಯಕ್ತಿಗೆ ಅಲ್ಲಿ ಬೇಕಾಗುವುದು ಕಾಫಿಯೊಂದಿಗೆ ಸ್ವಲ್ಪ ಏಕಾಂತ, ಸ್ವಲ್ಪ ಜನರ ನಡುವೆ ಇರುವ ಅನುಭವ, ಸ್ವಲ್ಪ ಹಿನ್ನೆಲೆ ಸದ್ದು, ಸ್ವಲ್ಪ ಗಮನದ ಸ್ವಾತಂತ್ರ್ಯ ಮತ್ತು ಮನೆಯ ಅಥವಾ ಕಚೇರಿಯ ನಿಯಮಗಳಿಂದ ದೂರವಿರುವ ಒಂದು ಸಣ್ಣ ಜಾಗ.
ಹಾಗಾದರೆ ಕಾಫಿ ಮುಖ್ಯ ಅಲ್ಲವೇ?
ಕೆಲವರಿಗೆ ಖಂಡಿತವಾಗಿಯೂ ಕಾಫಿಯೇ ಮುಖ್ಯ. ಆದರೆ ಕಾಫಿ ಶಾಪ್‌ಗೆ ಹೋಗುವ ಪ್ರತಿಯೊಬ್ಬರ ಉದ್ದೇಶ ಕಾಫಿ ಕುಡಿಯುವುದಷ್ಟೇ ಅಲ್ಲ. ಕೆಲವರು ಕೆಲಸ ಮಾಡಲು ಹೋಗುತ್ತಾರೆ. ಕೆಲವರು ಓದಲು ಹೋಗುತ್ತಾರೆ. ಕೆಲವರು ಜನರ ನಡುವೆ ಒಬ್ಬರೇ ಕುಳಿತುಕೊಳ್ಳಲು ಹೋಗುತ್ತಾರೆ. ಇನ್ನೂ ಕೆಲವರಿಗೆ ಮನೆಯ ವಾತಾವರಣದಿಂದ ಸ್ವಲ್ಪ ಹೊತ್ತು ಹೊರಬರಬೇಕೆನಿಸುತ್ತದೆ.
ಆದ್ದರಿಂದ ಕಾಫಿ ಶಾಪ್ ಒಂದು ಸಣ್ಣ ವಿರಾಮದ ಸ್ಥಳವಾಗಿಯೂ, ಕೆಲಸದ ಜಾಗವಾಗಿಯೂ, ಸಾಮಾಜಿಕ ಸಂಪರ್ಕದ ಜಾಗವಾಗಿಯೂ, ಕೆಲವೊಮ್ಮೆ ಮನಸ್ಸನ್ನು ಮರುಹೊಂದಿಸಿಕೊಳ್ಳುವ ಸ್ಥಳವಾಗಿಯೂ ಕೆಲಸ ಮಾಡಬಹುದು. ಬಹುಶಃ ಅದಕ್ಕೇ ಕೆಲವರು ಕಾಫಿ ಮುಗಿದ ಮೇಲೂ ಅಲ್ಲಿಂದ ಎದ್ದು ಹೋಗುವುದಿಲ್ಲ.


Click it and Unblock the Notifications
