ಕಾಂಗ್ರೆಸ್ಸಿಗರ ಚುಚ್ಚು ಮಾತಿಗಾದರೂ ಪ್ರಧಾನಿ ಮೋದಿ ಒಮ್ಮೆ ರಾಜ್ಯಕ್ಕೆ ಬರಬಾರದೇ?
ಕಂಡುಕೇಳರಿಯದ ಅತಿವೃಷ್ಟಿಯಿಂದ ಪ್ರಮುಖವಾಗಿ ಉತ್ತರ ಕರ್ನಾಟಕದ ಹಲವು ಭಾಗಗಳು ತತ್ತರಿಸಿ ಹೋಗಿವೆ. ಪ್ರವಾಹ ಸಂತ್ರಸ್ತರು, ಜಾತಕ ಪಕ್ಷಿಯಂತೆ, ಸರಕಾರದಿಂದ ಬರುವ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಆದರೆ, ಕೇಂದ್ರ ಸರಕಾರ ರಾಜ್ಯದ ಮನವಿಗೆ ಸ್ಪಂದಿಸಿದರೆ ತಾನೇ ಯಡಿಯೂರಪ್ಪ ಏನಾದರೂ ಮಾಡಿಯಾರು. ಅತ್ತ, ಪರಿಹಾರದ ಮಾತಿಲ್ಲ, ಇತ್ತ, ಪ್ರಧಾನಿ ಭೇಟಿಗೆ ಬಿಎಸ್ವೈಗೆ ಅವಕಾಶವೂ ಸಿಗುತ್ತಿಲ್ಲ. ಇದು, ಕಾಂಗ್ರೆಸ್ಸಿಗೆ, ಬಿಜೆಪಿ ವಿರುದ್ದ ಹೋರಾಡಲು, ಮೋದಿಯನ್ನು ಟೀಕಿಸಲು ಅವಕಾಶ ಸಿಕ್ಕಂತಾಗಿದೆ.
ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ರಾಜ್ಯ ಕಾಂಗ್ರೆಸ್ಸಿಗರು ಬಳಸುಕೊಳ್ಳುತ್ತಿದ್ದಾರೆ. ಇದು, ಕಾಂಗ್ರೆಸ್ಸಿನವರ ಪ್ರವಾಹ ಸಂತ್ರಸ್ತರ ಮೇಲಿನ ಅನುಕಂಪವೋ ಅಥವಾ ಇಲ್ಲೂ ರಾಜಕೀಯವೋ, ಅದು ಆನಂತರದ ವಿಚಾರ.
ಪ್ರಧಾನಿ ಮೋದಿ ಒಮ್ಮೆ ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಬೇಕಾಗಿತ್ತು ಎಂದು ಬಿಜೆಪಿಯವರ ಆತ್ಮಸಾಕ್ಷಿಯೂ ಹೇಳುತ್ತಿರಬಹುದು. ಆದರೆ, ಧಣಿ ಬಗ್ಗೆ ವಿರೋಧ ಪಕ್ಷದವರು ಮಾತನಾಡಿದರೆ ಸುಮ್ಮನಿರಲು ಸಾಧ್ಯವೇ?

ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ
ಭಾರೀ ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕದ ಭಾಗದ ಜನರ ಗೋಳು ಹೇಳತೀರದು. ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಮ್ಮೆ ಬಂದು ವೈಮಾನಿಕ ಸಮೀಕ್ಷೆ ನಡೆಸಿಹೋದರು.

ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾದರು
ಇದಾದ ಮೇಲೆ, ಒಮ್ಮೆ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾದರು. ತಂಡವನ್ನು ಕಳುಹಿಸುತ್ತೇನೆ ಎಂದು ಪ್ರಧಾನಿಗಳು ಭರವಸೆ ನೀಡಿದರೋ? ಸಾಗ ಹಾಕಿದರೋ? ಗೊತ್ತಿಲ್ಲಾ.. ತಂಡವನ್ನು ಆಮೇಲೆ ಕಳುಹಿಸಿ, ಮೊದಲು, ತುರ್ತು ಪರಿಹಾರಕ್ಕಾಗಿಯಾದರೂ ಹಣ ಬಿಡುಗಡೆ ಮಾಡಬಹುದಿತ್ತಲ್ಲವೇ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಈ ಪ್ರಸ್ತಾವನೆಯನ್ನು ಸಿಎಂ ಖಂಡಿತ, ಪ್ರಧಾನಿ ಮುಂದೆ ಇಟ್ಟಿರುವುದು ಡೌಟು.

ಪ್ರಧಾನಿಯನ್ನು ಭೇಟಿಯಾಗಲು ಮುಖ್ಯಮಂತ್ರಿಗಳು ಮತ್ತೆ ಸಮಯವನ್ನು ಕೋರಿದ್ದರು
ಪ್ರಧಾನಿಯನ್ನು ಭೇಟಿಯಾಗಲು ರಾಜ್ಯದ ಮುಖ್ಯಮಂತ್ರಿಗಳು ಮತ್ತೆ ಸಮಯವನ್ನು ಕೋರಿದ್ದರು. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಹೀಗೆ, ಅವಕಾಶ ಸಿಗದೇ ಇರುವುದು, ಇದು ಎರಡನೇ ಬಾರಿ. ಕೆಲವು ದಿನಗಳ ಹಿಂದೆಯೂ ಇದೇ ರೀತಿ ಆಗಿತ್ತು. ಆಗ, " ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು.

ಸಿದ್ದರಾಮಯ್ಯ ಟ್ವೀಟ್ ಸ್ಯಾಂಪಲ್
ಈಗ ಮತ್ತದೇ ರಿಪೀಟ್ ಆಗುತ್ತಿದೆ. ಕಾಂಗ್ರೆಸ್ಸಿನ ಸಾಲುಸಾಲು ಮುಖಂಡರು, ಮೋದಿ ವಿರುದ್ದ ಟ್ವೀಟ್ ಪ್ರವಾಹ ಹರಿಸುತ್ತಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್, ಕೆಪಿಸಿಸಿ, ದಿನೇಶ್ ಗುಂಡೂರಾವ್ ಆದಿಯಾಗಿ, ತರತರಹದ ಟ್ವೀಟ್ ಮೂಲಕ, ಬಿಜೆಪಿಯನ್ನು ಮತ್ತು ಮೋದಿಯವನ್ನು ಟೀಕಿಸಲಾಗುತ್ತಿದೆ. " ಅತಿವೃಷ್ಟಿಯಂತಹ ತುರ್ತು ಸ್ಥಿತಿಯಲ್ಲಿ @PMOIndia ರಾಜ್ಯದ @CMofKarnataka ಸಂದರ್ಶನ ನಿರಾಕರಿಸುತ್ತಿರುವುದು @BSYBJP ಅವರಿಗೆ ಅವಮಾನವಾದರೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸರು" ಇದು ಸಿದ್ದರಾಮಯ್ಯ ಟ್ವೀಟ್ ಸ್ಯಾಂಪಲ್.

ಕಾಂಗ್ರೆಸ್ಸಿಗರ ಚುಚ್ಚು ಮಾತಿಗಾದರೂ ಪ್ರಧಾನಿ ಮೋದಿ ಒಮ್ಮೆ ಕರ್ನಾಟಕಕ್ಕೆ ಬರಬಾರದೇ?
" ಭೀಕರ ಪ್ರಕೃತಿ ವಿಕೋಪವನ್ನು ಈ ಮಟ್ಟಕ್ಕೆ ನಿರ್ಲಕ್ಷ್ಯಿಸಿದ ದೇಶದ ಏಕೈಕ ಪ್ರಧಾನಿ @narendramodi. ದುರ್ಬಲ ಸಿಎಂ @BSYBJP ಅವರಿಗೆ ಈ ಬಾರಿಯೂ ಸಮಯ ನೀಡದಿರುವ ಹೊಣೆಗೇಡಿ ಪಿಎಂ. ಬಿಜೆಪಿಯ 25 ಮಂದಿ ಅಸಮರ್ಥ ಮತ್ತು ಬೇಜವಾಬ್ದಾರಿ ಸಂಸದರು, ಕರ್ನಾಟಕಕ್ಕೆ ಈ ರೀತಿಯ ದ್ರೋಹ ಹಿಂದೆಂದೂ ಆಗಿರಲಿಲ್ಲ" ಇದು ಕೆಪಿಸಿಸಿ ಮಾಡಿರುವ ಟ್ವೀಟ್. ಇದನ್ನೆಲ್ಲಾ ನೋಡಿದಾಗ ಅನಿಸುವುದು, " ಕಾಂಗ್ರೆಸ್ಸಿಗರ ಚುಚ್ಚು ಮಾತಿಗಾದರೂ ಪ್ರಧಾನಿ ಮೋದಿ ಒಮ್ಮೆ ಕರ್ನಾಟಕಕ್ಕೆ ಬರಬಾರದೇ?" ಎಂದು.












Click it and Unblock the Notifications