ಯಾರಿಗೆ ಒಲಿಯಲಿದೆ ಜೆಡಿಎಸ್‌ನ 1 ಹೆಚ್ಚುವರಿ ಸಚಿವ ಸ್ಥಾನ
Recommended Video
ಬೆಂಗಳೂರು, ಜೂನ್ 10: ಯಾರಿಗೆ ಜೆಡಿಎಸ್‌ನ 1 ಹೆಚ್ಚುವರಿ ಮಂತ್ರಿ ಸ್ಥಾನ ಒಲಿಯಲಿದೆ ಎಂಬುದು ಸದ್ಯದ ಕುತೂಹಲವಾಗಿದೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಕುತೂಹಲಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.
ಇದೀಗ ಜೆಡಿಎಸ್‌ನ ಒಂದು ಹೆಚ್ಚುವರಿ ಸ್ಥಾನ ಯಾರಿಗೆ ಲಭ್ಯವಾಗಲಿದೆ ಎನ್ನುವುದೇ ಕುತೂಹಲಕಾರಿ ಅಂಶವಾಗಿದೆ.
ಬುಧವಾರ ಬೆಳಗ್ಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಒಂದು ಸ್ಥಾನ ಪಕ್ಷದಲ್ಲಿರುವವರಿಗೆ ನೀಡಲಾಗುತ್ತದೆಯೋ ಅಥವಾ ಮತ್ತೆ ಖಾಲಿ ಉಳಿಸಿಕೊಳ್ಳಲಾಗುತ್ತದೆಯೋ ಎಂಬುದು ಮಾತ್ರ ನಿಗೂಢವಾಗಿದೆ. ಈ ಕುರಿತು ಸೋಮವಾರ ಸ್ಪಷ್ಟನೆ ದೊರೆಯಲಿದೆ.

ಎರಡೂ ಸ್ಥಾನ ತಮಗೇ ಬೇಕು ಎಂದು ಕಾಂಗ್ರೆಸ್ ಬೇಡಿಕೆ
ಎರಡೂ ಸ್ಥಾನಗಳು ತಮಗೇ ಬೇಕು ಎಂದು ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸಹಮತ ನೀಡಿದ್ದರು. ಆದರೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಮಾತ್ರ ಒಂದು ಸ್ಥಾನ ನೀಡುವುದಾಗಿ ಪಟ್ಟುಹಿಡಿದಿದ್ದರು.

ಜೆಡಿಎಸ್ ಪಾಲಿನ ಒಂದು ಸಚಿವ ಸ್ಥಾನ ಯಾರಿಗೆ?
ಜೆಡಿಎಸ್ ಪಾಲಿನ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕ ಎನ್.ನಾಗೇಶ್ ಅವರಿಗೆ ನೀಡಿದ ನಂತರ ಉಳಿಯುವ ಮತ್ತೊಂದು ಸ್ಥಾನವನ್ನು ಪಕ್ಷದ ಶಾಸಕರಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ.

ವಿಧಾನ ಪರಿಷತ್ ಸದಸ್ಯರಿಗೆ ಸಿಗುತ್ತಾ ಮಂತ್ರಿ ಹುದ್ದೆ
ಜೆಡಿಎಸ್ ವತಿಯಿಂದ ವಿಧಾನಪರಿಷತ್ ಸದಸ್ಯರಿಗೆ ಒಂದು ಸಚಿವ ಸ್ಥಾನವನ್ನೂ ನೀಡಿಲ್ಲ, ಹೀಗಾಗಿ ಪರಿಷತ್ ಸದಸ್ಯರಿಗೆ ಕೊಡುವುದು ಸೂಕ್ತ ಎಂಬ ಒಲವು ಪಕ್ಷದಲ್ಲಿ ವ್ಯಕ್ತವಾಗಿದೆ. ಆ ಪೈಕಿ ಬಸವರಾಜ ಹೊರಟ್ಟಿ, ಬಿಎಂ ಫಾರೂಕ್, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿರುವ ಎಚ್ ವಿಶ್ವನಾಥ್ ಹೆಸರೂ ಪ್ರಸ್ತಾಪವಾಗಿದೆ.

ದೇವೇಗೌರು, ಕುಮಾರಸ್ವಾಮಿ ಅಭಿಪ್ರಾಯವೇನು?
ಹೊರಟ್ಟಿ ಅವರಿಗಿಂತ ಫಾರೂಕ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ. ಎನ್ನಲಾಗುತ್ತಿದೆಯಾದರೂ ಇದುವರೆಗೆ ಫಾರೂಕ್ ಅವರಿಗೂ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್ ನಿಂದ ಒಂದು ಸ್ಥಾನವನ್ನೂ ನೀಡಿಲ್ಲ. ಕಾಂಗ್ರೆಸ್‌ನಿಂದ ಮೂವರು ಮುಸ್ಲಿಂ ಸಮುದಾಯದ ಸಚಿವರಿದ್ದಾರೆ. ಯುಟಿ, ಖಾದರ್, ಜಮೀರ್ ಅಹಮದ್, ರಹೀಂ ಖಾನ್ ಇದೀಗ ಜೆಡಿಎಸ್‌ನಿಂದಲೂ ಒಂದು ಸ್ಥಾನವನ್ನು ನೀಡುವ ಮೂಲಕ ಆ ವರ್ಗದವರ ವಿಶ್ವಾಸ ಉಳಿಸಿಕೊಳ್ಳಲು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ.











Click it and Unblock the Notifications