Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಗಾಯಗೊಂಡವರು ಯಾರ್ಯಾರು?
ಬೆಳಗಾವಿ, ಜನವರಿ 15: ಸಂಕ್ರಾಂತಿ ಹಬ್ಬದ ದಿನವೇ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಇನ್ನೂ ಒಂದು ತಿಂಗಳ ಗೃಹ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ಸಚಿವ ಸಂಪುಟ ಸಭೆ ಮುಗಿಸಿ ಸಂಕ್ರಾಂತಿ ಹಬ್ಬ ಆಚರಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದರು. ಬೆಳಗಿನ ಜಾವ ಆರು ಘಂಟೆ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಕಾರಿಗೆ ಏಕಾಏಕಿ ಅಡ್ಡ ಬಂದ ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಸಚಿವೆಯ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಕಾರಿನಲ್ಲಿದ್ದ ಸಚಿವೆ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್ 1 ಮತ್ತು ಎಲ್ 4 ಮೂಳೆ ಮುರಿತವಾಗಿದೆ. ಅಲ್ಲದೇ ಕುತ್ತಿಗೆಗೆ ಪೆಟ್ಟು ಬಿದ್ದ ಕಾರಣ ಮೆದುಳು ಬಾವು ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಅಪಘಾತವಾದ ಕಾರಿನಲ್ಲಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾಹಿತಿ ನೀಡಿದ್ದು, 'ನಾವು ಹೋಗುತ್ತಿದ್ದ ಸಮಯದಲ್ಲಿ ನಾಯಿಗಳು ಅಡ್ಡ ಬಂದಿರುವುದು ಹಾಗೂ ಜೊತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವಾಹನ ಇತ್ತು. ಇದರಿಂದ ಈ ದುರ್ಘಟನೆ ಸಂಭವಿಸಿದೆ. ತಡರಾತ್ರಿ ನಾವು ಹೊರಟಿರುವುದರಿಂದ ಬೆಂಗಾವಲು ವಾಹನ ಇರಲಿಲ್ಲ. ಚಾಲಕ ಹಾಗೂ ಗನ್ ಮ್ಯಾನ್ ಮುಂದೆ ಕುಳಿತಿದ್ದರು. ನಾವಿಬ್ಬರು ಹಿಂದೆ ಕುಳಿತಿದ್ದೆವು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗನ್ ಮ್ಯಾನ್‌ಗೆ ಭುಜ ನೋವಾಗಿದೆ ಆದರೆ ಯಾವುದೇ ಅಪಾಯ ಇಲ್ಲ. ಮಂತ್ರಿಯವರನ್ನು ಬಿಟ್ಟು ಬೇರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ' ಎಂದು ತಿಳಿಸಿದ್ದಾರೆ.












Click it and Unblock the Notifications