Karnataka Bundh: ಕರ್ನಾಟಕ ಬಂದ್‌ಗೆ ಯಾವೆಲ್ಲಾ ಜಿಲ್ಲೆಗಳಲ್ಲಿ ಬೆಂಬಲ?
Karnataka Bundh: ಇತ್ತೀಚೆಗಷ್ಟೇ ಮರಾಠಿ ಪುಂಡರು ಕರ್ನಾಟಕ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಾಗೂ ಚಾಲಕರಿಗೆ ಮಸಿ ಬಳಿದು ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಇಂದು (ಮಾರ್ಚ್ 22) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಬೆಂಬಲ ಸೂಚಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂದು (ಮಾರ್ಚ್ 22) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಇರಲಿದೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಮರಾಠಿಗರು ಕನ್ನಡ ವಿರೋಧಿ ನೀತಿ ಹಾಗೂ ಅವರಿಂದ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.

ಯಾವ್ಯಾವ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ?: ಬೆಂಗಳೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ದಾವಣಗೆರೆಯ ಸಂಗೋಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನಾಕಾರರು ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲೂ ಕರ್ನಾಟಕ ಬಂದ್ ಬೆಂಬಲಿಸಿ ಬೆಳ್ಳಂಬೆಳಗ್ಗೆ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಸೇನೆ, ಕ.ರ.ವೆ ಶಿವರಾಮೆ ಗೌಡ ಬಣದ ಮುಖಂಡರುಗಳು ಬಂದ್‌ಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಮೈಸೂರಿನ ಮುಖ್ಯ ಬಸ್ ನಿಲ್ದಾಣದಲ್ಲಿ ಮಾರ್ಚ್ 22ರಂದು ಸಾರಿಗೆ ಬಸ್ಸುಗಳ ಕೊರತೆ ಕಂಡುಬಂತು. ಅಗತ್ಯ ಕೆಲಸಗಳಿಗಾಗಿ ಪರ ಊರುಗಳಿಗೆ ಪ್ರಯಾಣಿಸುವವರಿಗೆ ತೊಂದರೆ ಆಗಿತ್ತು. ಕೆಎಸ್‌ಆರ್‌ಟಿಸಿ ಅಧೀನದ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಸಂಘಟನೆಗಳು ಈ ಪ್ರತಿಭಟನೆ ಹಮ್ಮಿಕೊಂಡಿವೆ. ಇದಕ್ಕೆ ಕೆಲವು ಕನ್ನಡಪರ ಸಂಘಟನೆಗಳೂ ಕೈ ಜೋಡಿಸಿವೆ.
ಕರ್ನಾಟಕ ಬಂದ್ 2025 ಮೈಸೂರಿನಲ್ಲಿ ಅಲ್ಲಲ್ಲಿ ಬಸ್ ಸಂಚಾರ ಇದ್ದು, ಅದು ಕನ್ನಡ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ. ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಓಡಾಡುತ್ತಿದ್ದ ಖಾಸಗಿ ಬಸ್ ಅನ್ನು ತಡೆದ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆ ತಾರಕಕ್ಕೇರಿಲ್ಲ.
ಯಾವ್ಯಾವ ಜಿಲ್ಲೆಯಲ್ಲಿ ಬಂದ್ ಬಿಸಿ ತಟ್ಟಿಲ್ಲ?: ಚಿತ್ರದುರ್ಗದಲ್ಲಿ ಕರ್ನಾಟಕ ಬಂದ್ ಬಿಸಿ ತಟ್ಟಿಲ್ಲ. ಅಲ್ಲಿ ಸಣ್ಣಪುಟ್ಟ ಹೋಟೆಲ್‌ಗಳು, ಖಾನಾವಳಿಗಳು ಓಪನ್ ಆಗಿವೆ. ಬಸ್ ಆಟೋ ಸಂಚಾರ ಎಂದಿನಂತಿವೆ. ಚಿಕ್ಕಮಗಳೂರು ಜಿಲ್ಲೆಯ ಬಸ್ ಸ್ಟ್ಯಾಂಡ್ ಗಳಲ್ಲಿನ ಹೋಟೆಲ್ ಗಳು ಹಾಗೂ ಅಂಗಡಿಗಳನ್ನು ಮುಚ್ಚಿಸಲು ಕೆಲವು ಕನ್ನಡಪರ ಸಂಘಟನೆಗಳು ಮುಂಜಾನೆಯೇ ಮುಂದಾದ ಹಿನ್ನೆಲೆ ಅಲ್ಲಿ ಮಾತಿನ ಚಕಮಕಿ ನಡೆದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರ ಮಧ್ಯಪ್ರವೇಶಿಸಿ ಬಲವಂತದ ಬಂದ್ ಇಲ್ಲ ಎಂದು ಕನ್ನಡಪರ ಸಂಘಟನೆಗಳಿಗೆ ತಿಳಿಹೇಳಿದರು.












Click it and Unblock the Notifications