ಟಿಕೆಟ್ ಬಗ್ಗೆ ಹೆಚ್ಚಿದ ಕುತೂಹಲ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಬೆಳಗಾವಿ, ಮಾರ್ಚ್ 31: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದರೂ ವಿವಿಧ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿರುವ ಬಗ್ಗೆ ಎಲ್ಲರನ್ನು ಹೆಚ್ಚಿನ ಕುತೂಹಲ ಮೂಡಿಸಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿಯನ್ನು ಏಪ್ರಿಲ್ 6 ಅಥವಾ 7 ರಂದು ಪ್ರಕಟಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಶುಕ್ರವಾರ ತಿಳಿಸಿದ್ದು, ನಾವು ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಏಪ್ರಿಲ್ 6 ಅಥವಾ 7 ರೊಳಗೆ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜೋಶಿ ಬೆಳಗಾವಿಯಲ್ಲಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾ ಪಕ್ಷದ ಟಿಕೆಟ್ ಆಕಾಂಕ್ಷಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಸಚಿವರು ಸಭೆ ನಡೆಸಿದ್ದರು. ಕರ್ನಾಟಕದಾದ್ಯಂತ, ಶುಕ್ರವಾರ ಬಿಜೆಪಿಯು ಎಲ್ಲಾ 39 ಸಂಘಟನಾ ಜಿಲ್ಲೆಗಳಲ್ಲಿ ಸ್ಥಳೀಯ ಮುಖಂಡರಿಂದ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ.
ಬಿಜೆಪಿ ಪಕ್ಷವು ವಿವಿಧ ಜಿಲ್ಲೆಗಳಲ್ಲಿ 97 ವೀಕ್ಷಕರನ್ನು ನೇಮಿಸಿದ್ದು, ಅವರು ಗುಪ್ತ ಮತದಾನದಲ್ಲಿ ಮತ ಚಲಾಯಿಸಲಿದ್ದಾರೆ. ಈ ಎಲ್ಲಾ ರಹಸ್ಯ ಮತದಾನವನ್ನು ಬೆಂಗಳೂರಿನ ಪಕ್ಷದ ಕಚೇರಿಗೆ ಕಳುಹಿಸಲಾಗುವುದು ಮತ್ತು ಏಪ್ರಿಲ್ 1 ಮತ್ತು 2 ರಂದು ನಿಗದಿಯಾಗಿರುವ ಕೋರ್ ಕಮಿಟಿ ಸಭೆಯಲ್ಲಿ ಹೆಸರುಗಳನ್ನು ಚರ್ಚಿಸಲಾಗುತ್ತದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳು, 4 ಕೇಂದ್ರ ಸಚಿವರು, 9 ಸಚಿವರು, 11 ಸಂಸದರು, 13 ಶಾಸಕರು ಮತ್ತು 24 ಎಂಎಲ್‌ಸಿಗಳಿಗೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಕೋರ್ ಕಮಿಟಿ ಸಭೆಯು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ ಮತ್ತು ಅದು ಹೆಸರನ್ನು ಅಂತಿಮಗೊಳಿಸುತ್ತದೆ.
ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಬಿಜೆಪಿ ಕೋರ್ ಕಮಿಟಿ ಎರಡು ದಿನಗಳ ಕಾಲ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ನಡೆದ ಚರ್ಚೆಯ ಪ್ರಕಾರ ರಾಜ್ಯ ಬಿಜೆಪಿ ಪಾಳಯದಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ಲಾಭಿ ನಡೆಸಿದ್ದು, ಕೆಲವರಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಡಿರುವ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಕುರಿತು ಸಾಕಷ್ಟು ಲೆಕ್ಕಾಚಾರವನ್ನು ಹಾಕಿಕೊಂಡಿದ್ದು, ಈಗಾಗಲೇ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದು, ರಾಜ್ಯದಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಇನ್ನೂ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲಗಳು ಹಾಗೂ ಭಿನ್ನಮತಗಳು ಉಂಟಾಗದ ರೀತಿಯಲ್ಲಿ ಟಿಕೆಟ್ ಘೋಷಿಸುವ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ.
ಸದ್ಯ ಕರ್ನಾಟಕದಲ್ಲಿ ಅಭ್ಯರ್ಥಿ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಆಯಾ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮತದಾನ ನಡೆಯಲಿದೆ. ಗೆಲುವಿನ ಅಭ್ಯರ್ಥಿಗೆ ಟಿಕೆಟ್ ನೀಡಲು ಪ್ಲಾನ್ ಮಾಡಲಾಗಿದೆ. ಏಪ್ರಿಲ್ 8 ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪಕ್ಷದ ಅಭ್ಯರ್ಥಿಯಾರಾಗಬೇಕು ಎಂದು ಪಕ್ಷದ ವಿವಿಧ 10 ಅಂಶಗಳಡಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸಜ್ಜಾಗಿದೆ. ಮಾ.31ರಿಂದ ರಾಜ್ಯದ 39 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಪ್ರಕ್ರಿಯೆ ಆರಂಭವಾಗಲಿದೆ.












Click it and Unblock the Notifications