13 ಸಾವಿರ ಹುದ್ದೆಗೆ ನೇಮಕಾತಿ : ಡಿಕೆ ಶಿವಕುಮಾರ್

ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ದಿನಚರಿ ಬಿಡುಗಡೆ ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 13 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದೆ ಎಂದು ತಿಳಿಸಿದರು.
ವಿದ್ಯಾರ್ಹತೆ ಬದಲು : ಸದ್ಯ ಲೈನ್‌ಮೆನ್ ನೇಮಕಾತಿಗೆ ನಿಗದಿಪಡಿಸಿರುವ ಐಟಿಐ ವಿದ್ಯಾರ್ಹತೆಯನ್ನು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ. ಎಸ್‌ಎಸ್‌ಎಲ್‌ಸಿ, 8ನೇ ತರಗತಿ ಅನುತ್ತೀರ್ಣರಾದವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. [ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ]
ಲೈನ್‌ಮೆನ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವವರಿಗೆ ಪೊಲೀಸ್ ಹುದ್ದೆ ಮಾದರಿಯಂತೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡಲು ಆಲೋಚಿಸಲಾಗಿದೆ. ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ವಿದ್ಯುತ್ ನೀಡಲು ಸಿದ್ಧ : ಕರ್ನಾಟಕದಲ್ಲಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡುವ ಉದ್ಯಮಿಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೊಸ ಉದ್ಯಮ ಸ್ಥಾಪನೆಯಿಂದ ಸಂಪನ್ಮೂಲ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇಲಾಖೆಗೆ ಕಳಪೆ ಗುಣಮಟ್ಟವಲ್ಲದ ಸಾಮಗ್ರಿಗಳನ್ನು ಪೂರೈಕೆ ಮಾಡುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ವಿದ್ಯುತ್ ಬಿಲ್ ಪೂರೈಕೆ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇದಕ್ಕಾಗಿ ಪ್ರತಿ ವಿದ್ಯುತ್ ಉಪಠಾಣೆಯಲ್ಲಿ ಸಮಿತಿ ರಚಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.












Click it and Unblock the Notifications