ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್ ಬೆಲ್’ ವ್ಯವಸ್ಥೆ ಕಡ್ಡಾಯ, ಹೊಸ ಸುತ್ತೋಲೆಯ ಪ್ರಮುಖ ಅಂಶಗಳು
ಮಕ್ಕಳಲ್ಲಿ ನೀರು ಕುಡಿಯುವ ಮಹತ್ವದ ಬಗ್ಗೆ ಅಗತ್ಯ ಜಾಗೃತಿಯ ಕೊರತೆ ಇರುವ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸುವ ಉದ್ದೇಶದೊಂದಿಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ 'ವಾಟರ್ ಬೆಲ್' (ನೀರಿನ ಗಂಟೆ) ವ್ಯವಸ್ಥೆ ಜಾರಿಗೆ ತರಲು ಪಿಎಂ-ಪೋಷಣ್ ಯೋಜನೆಯ ನಿರ್ದೇಶಕರು ಸೂಚಿಸಿದ್ದಾರೆ. ಈ ಸಂಬಂಧ ಜನವರಿ 14ರಂದು ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳಲ್ಲಿ ಇದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ. ನಿಯಮಿತವಾಗಿ ಗಂಟೆ ಮೂಲಕ ಮಕ್ಕಳಿಗೆ ನೀರು ಕುಡಿಯುವುದನ್ನು ನೆನಪಿಸುವುದರಿಂದ ಮೆಟಾಬೊಲಿಸಂ ಸುಧಾರಣೆ, ಡಿಹೈಡ್ರೇಷನ್‌ನಿಂದ ಉಂಟಾಗುವ ಸಮಸ್ಯೆಗಳ ತಡೆ ಹಾಗೂ ಕ್ರೀಡಾಕ್ಷೇತ್ರದಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಸಹಕಾರಿಯಾಗುತ್ತದೆ ಎಂದು ವಿವರಿಸಲಾಗಿದೆ.

ಮಕ್ಕಳ ಹಕ್ಕುಗಳ ಆಯೋಗ ಶಿಫಾರಸು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಈ ಸಂಬಂಧ ಪತ್ರ ಬರೆದಿದ್ದರು. ಕಳೆದ ನವೆಂಬರ್ 26ರಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಈ ಕುರಿತು ಪತ್ರ ಬರೆದು, ರಾಜ್ಯದ ಎಲ್ಲ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆ ಜಾರಿಗೆ ತರಲು ಮನವಿ ಸಹ ಮಾಡಿದ್ದರು.
"ಕಳೆದ ವರ್ಷ ಹಲವು ಶಾಲೆಗಳಿಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ನೀರು ಕುಡಿಯುವ ಮಹತ್ವ ಅರಿಯದೇ ನಿಯಮಿತವಾಗಿ ನೀರು ಕುಡಿಯದೆ ಇರುವುದನ್ನು ಗಮನಿಸಿದೆ. ಈ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿ, ಮಕ್ಕಳಿಗೆ ನೆನಪಿಸಲು ವಾಟರ್ ಬೆಲ್ ವ್ಯವಸ್ಥೆ ಅಗತ್ಯ ಎಂದು ಆಯುಕ್ತರಿಗೆ ಪತ್ರ ಬರೆದಿದ್ದೇನೆ" ಎಂದು ಕೋಸಂಬೆ ವಿವರಿಸಿದ್ದಾರೆ.
ತಜ್ಞರ ಅಭಿಪ್ರಾಯ ಏನು?
ಈ ನಿರ್ಧಾರದ ಬಗ್ಗೆ ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ.ರಾವ್ ಪ್ರತಿಕ್ರಿಯಿಸಿದ್ದಾರೆ. "ವಾಟರ್ ಬೆಲ್ ಬಗ್ಗೆ ಕೇವಲ ಸುತ್ತೋಲೆ ಹೊರಡಿಸುವುದು ಸಾಕಾಗುವುದಿಲ್ಲ. ಪ್ರತಿ ವಿದ್ಯಾರ್ಥಿಗೂ ಶಾಲಾ ಸಮವಸ್ತ್ರ, ಶೂ-ಸಾಕ್ಸ್ ಜೊತೆಗೆ ನೀರಿನ ಬಾಟಲಿ ನೀಡುವುದು ಕೂಡ ಮುಖ್ಯ. ಗ್ರಾಮೀಣ ಪ್ರದೇಶಗಳ ಹಲವಾರು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶುದ್ಧ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ವಾಟರ್ ಬೆಲ್ ವ್ಯವಸ್ಥೆ ಕೇವಲ ಕಾಗದಕ್ಕೆ ಸೀಮಿತವಾಗಬಾರದು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂಬುದನ್ನು ಖಚಿತಪಡಿಸಬೇಕು. ಇದು ಸರಿಯಾಗಿ ಜಾರಿಯಾದರೆ ಮಾತ್ರ ಮಕ್ಕಳ ಆರೋಗ್ಯವನ್ನು ಕಾಪಾಡಲು ಸಾಧ್ಯ" ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರಾದ ಎಚ್.ಸಿ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಈ ವಾಟರ್ ಬೆಲ್ ಕ್ರಮ, ಪರಿಣಾಮಕಾರಿಯಾಗಿ ಜಾರಿಯಾದರೆ ಮಕ್ಕಳಲ್ಲಿ ಉತ್ತಮ ಆರೋಗ್ಯಕರ ಅಭ್ಯಾಸ ಬೆಳೆಸುವ ಮಹತ್ವದ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಶಿಕ್ಷಣ ತಜ್ಞರು ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರು, ಮೊದಲು ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನಂತರವೇ ಇಂತಹ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ವಾಟರ್ ಬೆಲ್ ಒಳ್ಳೆಯ ಯೋಚನೆಯಾದರೂ, ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದು ತುರ್ತು ಅಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಕನಿಷ್ಠ 61 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. ಜೊತೆಗೆ, 170 ಶಾಲೆಗಳಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆಯೂ ಇಲ್ಲ ಎನ್ನುವುದು ಬಹಿರಂಗವಾಗಿದೆ.












Click it and Unblock the Notifications