ಒಕ್ಕಲಿಗರ ಸಂಘದ ಚುನಾವಣೆ ರದ್ದು, ಯಾರಾಗಲಿದ್ದಾರೆ ಅಧ್ಯಕ್ಷರು?
ಬೆಂಗಳೂರು, ಆಗಸ್ಟ್ 06 : ಆಗಸ್ಟ್ 10ರಂದು ನಡೆಯಬೇಕಿದ್ದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ರದ್ದುಗೊಂಡಿದೆ. ಸಂಘದ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಅವರನ್ನು ಕಳೆದ ವಾರದ ಪದಚ್ಯುತಿಗೊಳಿಸಲಾಗಿತ್ತು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ. ಆದ್ದರಿಂದ, ಅಧ್ಯಕ್ಷರ ಆಯ್ಕೆಗೆ ನಡೆಯಬೇಕಿದ್ದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
'ಎಚ್.ಡಿ.ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿ ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ. ಇದನ್ನು ನಾವು ಕೂಡಾ ಒಪ್ಪಿಕೊಂಡಿದ್ದೇವೆ' ಎಂದು ನಿಕಟಪೂರ್ವ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಹೇಳಿದ್ದಾರೆ.

'ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಚುನಾವಣೆ ಬೇಡ. ನಾವೇ ಅಧ್ಯಕ್ಷರನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಅವರು ನೀಡಿದ ಮಾತಿನಂತೆ ಅಧ್ಯಕ್ಷರ ಘೋಷಣೆಯಾಗಲಿದೆ' ಎಂದು ಅಪ್ಪಾಜಿ ಗೌಡ ತಿಳಿಸಿದರು.
'ಈಗ ಆಗಿರುವ ತಂಟೆ ತಕರಾರುಗಳು ಸಾಕು. ಇನ್ನು ಮುಂದೆ ಒಂದಾಗಿ ಕೆಲಸಗಳನ್ನು ಮಾಡಬೇಕಿದೆ. ನ್ಯಾಯಾಲಯದಲ್ಲಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆದುಕೊಂಡು ಅಧ್ಯಕ್ಷರನ್ನು ಆಯ್ಕೆ ಮಾಡೋಣ ಎಂಬ ನಿರ್ಧಾರಕ್ಕೆ ಬರಲಾಗಿದೆ' ಎಂದರು.












Click it and Unblock the Notifications