ವೈರಲ್ ವಿಡಿಯೋ ಸುಳ್ಳು, ತಿರುಚಲಾಗಿದೆ: ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ
ಬೆಂಗಳೂರು: ಮಹಿಳೆಯೊಂದಿಗೆ ಕಚೇರಿಯೊಳಗಿನ ಸರಸವಾಡಿರುವುದಾಗಿ ಆರೋಪಿಸಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಡಿಜಿಪಿ ರಾಮಚಂದ್ರ ರಾವ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಸಂಪೂರ್ಣವಾಗಿ ಸುಳ್ಳು ಮತ್ತು ತಿರುಚಿದ ವಿಡಿಯೋ ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಜಿಪಿ ರಾಮಚಂದ್ರ ರಾವ್, "ಈ ವಿಡಿಯೋ ಹಳೆಯದು. ಈ ಕಾಲದಲ್ಲಿ ಏನು ಬೇಕಾದರೂ ತಿರುಚಿ ಮಾಡಬಹುದು. ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಈಗ ವೈರಲ್ ಆಗಿರುವ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದಾರೆ.

'ಇದು ನನ್ನ ತೇಜೋವಧೆ ಮಾಡಲು ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರ. ವಿಡಿಯೋ ಸಂಪೂರ್ಣವಾಗಿ ಸುಳ್ಳು ಮತ್ತು ತಿರುಚಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. ಈ ವಿಚಾರದ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಲು ತಾವು ಸ್ವತಃ ಅವರ ನಿವಾಸಕ್ಕೆ ಬಂದಿದ್ದೇನೆ ಎಂದರು. ಈ ಪ್ರಕರಣ ಸಂಬಂಧ ನಾನು ನನ್ನ ವಕೀಲರೊಂದಿಗೆ ಚರ್ಚೆ ನಡೆಸುತ್ತೇನೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ ಪಡೆಯುತ್ತೇನೆ' ಎಂದು ಹೇಳಿದರು.
ವೈರಲ್ ಆಗಿರುವ ವಿಡಿಯೋಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಯಬೇಕೆಂದು ಒತ್ತಾಯಿಸಿದ ಅವರು, 'ಯಾವುದೇ ನಿರ್ಧಾರಕ್ಕೆ ಬರಲು ತನಿಖೆಯೇ ಅಂತಿಮ' ಎಂದು ಅಭಿಪ್ರಾಯಪಟ್ಟರು. ಈ ಬೆಳವಣಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಾಗೂ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಏನಂದ್ರು?
ಡಿಜಿಪಿ ರಾಮಚಂದ್ರರಾವ್ ಅವರು ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿರುವ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಉನ್ನತ ಮಟ್ಟದ ಅಧಿಕಾರಿಯಾದ ಮಾತ್ರಕ್ಕೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಅವರ ಈ ಹೇಳಿಕೆಯ ಕೆಲವೇ ಹೊತ್ತಿನಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರು ರಜೆ ಹಾಕಿ ತೆರಳಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರಾಜ್ಯದ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನಿಖೆ ಆರಂಭಕ್ಕೂ ಮುನ್ನವೇ ಡಿಜಿಪಿ ರಜೆ ಪಡೆದಿರುವುದರಿಂದ ಹಲವು ಅನುಮಾನಗಳು ಮೂಡಿವೆ. ಈ ನಡುವೆ ಪ್ರಕರಣದ ಕುರಿತು ಮಾಜಿ ಪೊಲೀಸ್ ಅಧಿಕಾರಿಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬೆಳವಣಿಗೆ ಪೊಲೀಸ್ ಇಲಾಖೆಯ ಒಳಾಂಗಣ ಶಿಸ್ತು ಮತ್ತು ಆಡಳಿತದ ಮೇಲೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಜೆಡಿಎಸ್ ತರಾಟೆ
ಈ ವಿಡಿಯೋ ಸಂಬಂಧ ಜೆಡಿಎಸ್ ಕೂಡ ಗಂಭೀರ ಆರೋಪ ಮಾಡಿದೆ. ಗೃಹ ಸಚಿವ ಪರಮೇಶ್ವರ್ ಅವರ ಆಪ್ತ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಬಯಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಪೊಲೀಸ್ ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಮಹಿಳೆಯರೊಂದಿಗೆ ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ನೆರವು ನೀಡಿದ ಆರೋಪವೂ ಸಹ ಡಿಜಿಪಿ ರಾಮಚಂದ್ರ ರಾವ್ ಮೇಲಿತ್ತು ಎಂದು ಉಲ್ಲೇಖಿಸಿದೆ.
ಸರ್ಕಾರದ ನಿಷ್ಕ್ರಿಯ ಆಡಳಿತ ಹಾಗೂ ಅಸಮರ್ಥ ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ನಮ್ಮ ರಾಜ್ಯದ ಹೆಮ್ಮೆಯ ಪೊಲೀಸ್ ಇಲಾಖೆಯ ಮಾನ ಮತ್ತೊಮ್ಮೆ ಹರಾಜಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತತಕ್ಷಣವೇ ಡಿಜಿಪಿ ರಾಮಚಂದ್ರ ರಾವ್ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.












Click it and Unblock the Notifications