ವಾಹನ ಮಾಲೀಕರೇ ಗಮನಿಸಿ, ನಂಬರ್ ಪ್ಲೇಟ್ ಹೆಸರಲ್ಲಿ ನಿಮ್ಮನ್ನು ವಂಚಿಸುವವರು ಇದ್ದಾರೆ ಹುಷಾರ್!
ಬೆಂಗಳೂರಿನಲ್ಲಿ ಕಾರು, ಬೈಕ್ ಇಟ್ಟುಕೊಳ್ಳುವುದು ಅಂದ್ರೆ ಆನೆ ಸಾಕಿದಂತೆ ಸರಿ. ಅದ್ರಲ್ಲೂ ಬಡ & ಮಧ್ಯಮ ವರ್ಗದ ಜನರಿಗೆ ಬೆಂಗಳೂರಲ್ಲಿ ಒಂದು ಗಾಡಿ ಇಲ್ಲವೆಂದರೆ ತಮ್ಮ ಜೀವನ ಸಾಗಿಸುವುದು ಕೂಡ ಕಷ್ಟ. ಕೆಲಸಕ್ಕೆ ಮತ್ತು ಕುಟುಂಬದ ಅಗತ್ಯತೆಗೆ ಗಾಡಿ ಇಟ್ಟುಕೊಳ್ಳುವ ಜನರನ್ನೇ ಇಲ್ಲಿ ಆನ್‌ಲೈನ್ ಕಳ್ಳರು & ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರವನ್ನ ಅಸ್ತ್ರ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಈ ಡಿಜಿಟಲ್ ಯುಗದಲ್ಲಿ ನಯವಂಚಕರು ಜಾಸ್ತಿ. ಅದರಲ್ಲೂ ಆನ್‌ಲೈನ್ ಆಸೆ ತೋರಿಸಿ ಹಳ್ಳಕ್ಕೆ ಬೀಳಿಸುವ ನಯವಂಚಕರು, ದುಡ್ಡು ಕಸಿದು ಮೋಸ ಮಾಡುತ್ತಿರುತ್ತಾರೆ. ಇದೀಗ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಕೂಡ ಹೀಗೆಯೇ ಆಗುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತಷ್ಟು ಸಮಯ ನೀಡಿದೆ. ಡೆಡ್‌ಲೈನ್ ಮತ್ತೆ 3 ತಿಂಗಳು ಮೂಂದೂಡಿಕೆ, ಮಾಡಲಾಗಿದೆ. ಇದೇ ಪರಿಸ್ಥಿತಿಯಲ್ಲಿ ನಕಲಿ ವೆಬ್‌ಸೈಟ್ ಮೂಲಕ ವಂಚನೆ ಮಾಡುತ್ತಿರುವ ಸ್ಫೋಟಕ ಸಂಗತಿ ಇದೀಗ ಬಯಲಾಗಿದೆ. ಅದು ಹೇಗೆ ಗೊತ್ತೆ? ಮುಂದೆ ಓದಿ.

ನಕಲಿ ವೆಬ್‌ಸೈಟ್ ಮೂಲಕ ವಂಚನೆ?
ಅಷ್ಟಕ್ಕೂ ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಂದ್ರೆ ಎಚ್‌ಎಸ್‌ಆರ್‌ಪಿ ನೋಂದಣಿಗಾಗಿ ಇದೇ ಫೆಬ್ರವರಿ 17ರ ಡೆಡ್‌ಲೈನ್ ನೀಡಲಾಗಿತ್ತು. ಹೀಗಾಗಿ ಎದ್ದೂ ಬಿದ್ದು ವಾಹನ ಸವಾರರು ಈ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮುಂದಾಗಿದ್ದರು. ಆದರೆ ಇದೇ ಸಮಯಕ್ಕೆ ನಕಲಿ ವೆಬ್‌ಸೈಟ್ ರಚನೆ ಮಾಡಿಕೊಂಡು, HSRP ಹೆಸರಲ್ಲಿ ಮೋಸ ಮಾಡುತ್ತಿರುವುದು ಈಗ ಬಯಲಾಗಿದೆ. ಹೀಗೆ ಈ ನಕಲಿ ವೆಬ್‌ಸೈಟ್ ಮೂಲಕ ಹಲವರು ವಂಚನೆಗೆ ಒಳಗಾಗಿದ್ದಾರೆ.
ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಅಧಿಕಾರಿಗಳು ಅಲರ್ಟ್ ಆಗಿ, ನಕಲಿ ವೆಬ್‌ಸೈಟ್‌ಗೆ ಬೀಗ ಜಡಿದಿದ್ದಾರೆ. ಇಷ್ಟಾದರೂ ವಂಚಕರು ಮಾತ್ರ, ಜನರನ್ನು ವಂಚನೆ ಮಾಡಲು ನಂಬರ್ ಪ್ಲೇಟ್ ಹೆಸರಲ್ಲಿ ಹಲವು ದಾರಿ ಹುಡುಕುತ್ತಿದ್ದಾರೆ. ಹೀಗಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ವಿಚಾರದಲ್ಲಿ ಜನರು ಅಲರ್ಟ್ ಆಗಿ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೇ ಸರ್ಕಾರಿ ವೆಬ್‌ಸೈಟ್ ಮೂಲಕ ಮಾತ್ರವೇ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ನೋಂದಣಿ ಮಾಡಿಸಲು ಸೂಚನೆಯ ನೀಡಲಾಗಿದೆ.

ವೆಬ್‌ಸೈಟ್ ವಿಳಾಸ ಇಲ್ಲಿದೆ ನೋಡಿ
ಕರ್ನಾಟಕ ಸರ್ಕಾರದ ಸೂಚನೆ ಪ್ರಕಾರ, ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಹಾಗೂ ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿರುವ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ಕಾಲ್ ಮಾಡಿ, ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದು. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅವರಿಗೆ ಯಾವುದೇ ಮಾಹಿತಿ ಕೊಡಬೇಡಿ. ಹಾಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ. ಹೀಗೆಲ್ಲಾ ನೀವು ಅಲರ್ಟ್ ಆಗಿದ್ದರೆ ಮಾತ್ರ ನಿಮಗೆ ಸುರಕ್ಷತೆ ಇರಲಿದೆ, ಇಲ್ಲವಾದರೆ ನಿಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗೆ ಅಲರ್ಟ್ ಆಗಿ ನಿಮ್ಮ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳಿ, ಅಗತ್ಯ ಇದ್ದರೆ ಅಥವಾ ನಿಮ್ಮನ್ನು ಯಾರಾದರೂ ವಂಚನೆ ಮಾಡಿರುವುದು ಬೆಳಕಿಗೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ.












Click it and Unblock the Notifications