ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಫಿಕ್ಸ್: ವಿಜಯೇಂದ್ರಗೆ ಮೊದಲ ಸಂಕಷ್ಟ- ಕಾಂಗ್ರೆಸ್ ಲೆಕ್ಕಾಚಾರವೇನು?
ಬೆಂಗಳೂರು, ನವೆಂಬರ್ 23: ಬಿಜೆಪಿ ಹಿರಿಯ ಲಿಂಗಾಯತ ನಾಯಕ ವಿ ಸೋಮಣ್ಣ ಅವರು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ರು, ಇದೀಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡದ ಬಳಿಕೆ ಅಸಮಾಧಾನ ಹೆಚ್ಚಾಗಿದೆ.
ಹೌದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ಹಲವು ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ. ಈ ಪೈಕಿ ಮಾಜಿ ಸಚಿವ ಹಾಗೂ ಲಿಂಗಾಯತ ನಾಯಕರಲ್ಲಿ ವಿ ಸೋಮಣ್ಣ ಅವರು ಸಹ ಒಬ್ಬರಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ ಸೋಮಣ್ಣ ಹೀನಾಯವಾಗಿ ಸೋಲು ಕಂಡ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣಗೆ ನಿರಾಸೆಯಾಗಿದ್ದು, ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ.

ಇನ್ನೂ ರಾಜ್ಯ ಬಿಜೆಪಿ ಪಾಳಯದಲ್ಲಿ ಆಗುತ್ತರುವ ಬೆಳವಣೆಗೆಯಿಂದಾಗಿ ಬೇಸರಗೊಂಡಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಡಿಸೆಂಬರ್ 6ರಂದು ತುಮಕೂರಿನಲ್ಲಿ ರಾಜಕೀಯ ಶಕ್ತಿ ಪ್ರದರ್ಶನ ಮಾಡಿ ಹೈಕಮಾಂಡ್ ಗೆ ಸಂದೇಶ ರವಾನಿಸಲು ವಿ ಸೋಮಣ್ಣ ಸಜ್ಜಾಗಿದ್ದಾರೆ. ಅಲ್ಲದೇ ಬಿಜೆಪಿ ಪಾಳಯಕ್ಕೆ ಬಿಸಿಮುಟ್ಟಿಸುವ ಸಲುವಾಗಿ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಚಿವ ವಿ ಸೋಮಣ್ಣ ಸಿದ್ದತೆ ನಡೆಸಿದ್ದಾರೆ.
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವಂತೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದ್ದು, 20 ಕ್ಷೇತ್ರಗಳನ್ನ ಗೆಲ್ಲಲು ಹಲವು ತಂತ್ರಗಾರಿಕೆಯನ್ನ ನಡೆಸಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಹಾಗೂ ಜೆಡಿಎಸ್ ನಲ್ಲಿನ ಅಸಮಾಧಾನಿತ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ಅದರಂತೆ ಬಿಜೆಪಿಯಲ್ಲಿ ತೀವ್ರ ಅಸಮಾಧಾನಗೊಂಡಿರುವ ವಿ ಸೋಮಣ್ಣ ಅವರನ್ನ ಕಾಂಗ್ರೆಸ್ ಪಕ್ಷ ಕರೆತರುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಿರುವ ಸೋಮಣ್ಣ ಅವರು ಡಿಸೆಂಬರ್ 15 ರ ನಂತರ ಅಂದ್ರೆ ಬೆಳಗಾವಿಯನ್ನ ನಡೆಯುವ ಚಳಿಗಾಲದ ಅಧಿವೇಶನದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ ನಡೆಸುತ್ತಿರುವ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಕಾಂಗ್ರೆಸ್ ಬಿಗ್ ಆಫರ್ ನೀಡಿದೆ. ತುಮಕೂರು ಅಥವಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಅವಕಾಶ ನೀಡುವ ಗ್ಯಾರಂಟಿಯನ್ನ ಕಾಂಗ್ರೆಸ್ ನೀಡಿದೆ. ಏಕೆಂದರೆ ಬೆಂಗಳೂರು ದಕ್ಷಿಣ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ವಿ ಸೋಮಣ್ಣ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದು, ಆ ಮೂಲಕ ವಿ ಸೋಮಣ್ಣ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಹೆಚ್ಚು ಸ್ಥಾನವನ್ನ ಗೆಲ್ಲುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಬೆಂಗಳೂರು-ದಕ್ಷಿಣ ಲೋಕಸಭೆಯನ್ನು ಬಲಪಡಿಸಲು ವಿ ಸೋಮಣ್ಣ ಅವರನ್ನು ನಿಯೋಜಿಸಲು ಪ್ಲಾನ್ ಹಾಕಿಕೊಂಡಿದ್ದಾರೆ ಕಾಂಗ್ರೆಸ್, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆಯುವ ತಂತ್ರಗಾರಿಕೆಯನ್ನ ನಡೆಸಿದೆ. ಹಳೇ ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರ ಕೊರತೆಯನ್ನ ಕಾಂಗ್ರೆಸ್ ಎದುರಿಸುತ್ತಿದೆ. ಹೀಗಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಮೂಲಕ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ತುಮಕೂರಿನಲ್ಲಿ ರಾಜಕೀಯ ಲೆಕ್ಕಾಚಾರ ಹಾಗೂ ವೀರಶೈವ-ಲಿಂಗಾಯತ ಮುಖಂಡರು, ಮಠಮಾನ್ಯಗಳ ಜೊತೆ ಉತ್ತಮ ಒಡನಾಟದಲ್ಲಿರೋ ವಿ.ಸೋಮಣ್ಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಕಾಂಗ್ರೆಸ್ ನಡೆಸಿದೆ.
ವಿಜಯೇಂದ್ರಗೆ ಎದುರಾದ ಮೊದಲ ಸಂಕಷ್ಟ!
ಕೆಲ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡ ಮಾಜಿ ವಿ ಸೋಮಣ್ಣ ಬಿಜೆಪಿ ತೊರೆಯಲು ನಿರ್ಧಾರವೂ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಎದುರಾಗಿರುವ ಮೊದಲ ಸಂಕಷ್ಟವಾಗಿದ್ದು, ಈಗಾಗಲೇ ಅಸಮಾಧಾನಗೊಂಡ ಹಲವು ನಾಯಕರನ್ನ ವಿಜಯೇಂದ್ರ ಅವರು ಭೇಟಿಯಾಗಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಇತ್ತ ವಿ ಸೋಮಣ್ಣ ಅವರು ಬಿಜೆಪಿ ಬಿಟ್ಟು ಹೋದರೆ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗಲಿದೆ ಎಂಬ ಲೆಕ್ಕಾಚಾರ ಹಲವು ನಾಯಕರಾದ್ದಾಗಿದ್ದು, ವಿ ಸೋಮಣ್ಣ ಅವರನ್ನ ಮನವೊಲಿಸುವ ದೊಡ್ಡ ಸವಾಲು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಎದುರಾಗಿದೆ.












Click it and Unblock the Notifications