ತುಮಕೂರಿನಿಂದ ಲೋಕಸಭಾ ಸ್ಪರ್ಧೆಗೆ ಸೋಮಣ್ಣ ಸ್ಪಷ್ಟನೆ: ಸ್ವಪಕ್ಷದಲ್ಲೇ ಅಸಮಾಧಾನ
ಬೆಂಗಳೂರು, ಫೆಬ್ರವರಿ 05: ತುಮಕೂರು ಹಾಲಿ ಸಂಸದ ಜಿ.ಎಸ್ ಬಸವರಾಜ್ ನನಗೆ ಆತ್ಮೀಯರು. ತುಮಕೂರು ಕ್ಷೇತ್ರಕ್ಕೆ ನಾನು ಬರಬೇಕೆಂದು ಅವರ ಭಾವನೆಯಾಗಿದೆ. ತುಮಕೂರು ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಬೇಕೇ ಎನ್ನುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಾನು ಕಾರ್ಯ ತಂತ್ರ ಮಾಡಬೇಕಾಗಿಲ್ಲ. ಬೇರು ಬಿಗಿಯಾಗಿದೆ, ಪಕ್ಷನೂ ಬಿಗಿಯಾಗಿದೆ. ದೇಶಕ್ಕೆ ನರೇಂದ್ರ ಮೋದಿ ಆಡಳಿತ ಮುಂದುವರಿಯಬೇಕಿದೆ. ನನಗೆ ಅವಕಾಶ ಕೊಟ್ಟರೆ ಒಳ್ಳೆಯ ತನದಲ್ಲಿ ಕೆಲಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬುತ್ತೇನೆ ಎಂದು ಹೇಳಿದರು.

ದೆಹಲಿಗೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ, ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ, ಖಾಸಗಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಭೇಟಿಗೂ ಪ್ರಯತ್ನಿಸುತ್ತೇನೆ ಎಂದರು. ಇನ್ನು ಮಾಜಿ ಸಚಿವ ಕೆ.ಸುಧಾಕರ್ ಲೋಕಸಭಗೆ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಸುಧಾಕರ್ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಗೊತ್ತಿಲ್ಲದೆ ಮಾತಾಡುವುದು ಸರಿಯಲ್ಲ ಎಂದರು.
ತುಮಕೂರು ಲೋಕಸಭೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿ-ಮಾಜಿ ಸಚಿವ ಮಾಧುಸ್ವಾಮಿ
ತುಮಕೂರು ಲೋಕಸಭೆ ಟಿಕೆಕ್ ಆಕಾಂಕ್ಷಿಯಾಗಿರುವ ಬಗ್ಗೆ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಕೂಡ ಮಾತನಾಡಿದ್ದು, ತುಮಕೂರು ಲೋಕಸಭೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ವರಿಷ್ಟರಿಗೂ ತಿಳಿಸಿದ್ದೇನೆ. ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಸೇರಿದಂತೆ ಯಾರು ಬೇಕಾದರೂ ಟಿಕೆಟ್‌ಗಾಗಿ ಓಡಾಡಬಹುದು. ಹಾಲಿ ಸಂಸದ ಬಸವರಾಜ್ ಅವರು ಸೋಮಣ್ಣ ಪರ ಬ್ಯಾಟ್ ಬಿಸಿರುವುದು ಅವರ ವೈಯಕ್ತಿಕ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ತುಮಕೂರಿನಲ್ಲಿ ವಲಸೆ ಅಭ್ಯರ್ಥಿಗಳು ಗೆಲ್ಲಲ್ಲ ಅಂತಾ ನಾನು ಹೇಳುವುದಿಲ್ಲ. ಈ ಹಿಂದೆ ಬಂದವರು ಗೆದ್ದಿಲ್ಲ ಎಂದರು.
ಕೋದಂಡರಾಮಯ್ಯ ಸೋಲ್ತಾರೆ ಅಂತಾ ನಾನೇ ಹೇಳಿದ್ದೆ. ದೇವೇಗೌಡರು ಕೂಡ ಸೋತಿದ್ದರು. ಹಾಗಂದ ಮಾತ್ರಕ್ಕೆ ಮುಂದೆ ಬರುವವರು ಗೆಲ್ಲಲ್ಲ ಅಂತಾ ನಾನು ಹೇಳಲ್ಲ. ಸೋಮಣ್ಣ ಚಾಮರಾಜನಗರದಲ್ಲೂ ಸಕ್ರೀಯರಾಗಿದ್ದರು. ಹಾಸನದಲ್ಲೂ ಆ್ಯಕ್ಟೀವ್ ಆಗಿದ್ದರು, ಇಡೀ ರಾಜ್ಯದಲ್ಲಿ ಸಕ್ರೀಯರಾಗಿದ್ದಾರೆ. ಅವರು ಶಕ್ತಿ ಇದ್ದವರು, ಅವರ ಬಗ್ಗೆ ನಾವೇನು ಹೇಳಲಾಗುವುದಿಲ್ಲ. ನನಗೆ ಟಿಕೆಟ್ ಸಿಗುವಂತಹ ಭರವಸೆ ಇದೆ ಎಂದರು.












Click it and Unblock the Notifications