UPSC Results: ಕೋಚಿಂಗ್ ಇಲ್ಲದೇ ಧಾರವಾಡದ ಇಬ್ಬರು ಯುವತಿಯರಿಗೆ 101 ಮತ್ತು 404 ರ‍್ಯಾಂಕ್
ಧಾರವಾಡ, ಏಪ್ರಿಲ್ 16: ಕೇಂದ್ರ ಲೋಕಸೇವಾ ಆಯೋಗ (UPSC)ದ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ಅತ್ಯಧಿಕ ಅಂಕ ಪಡೆದು ಸಾಧನೆ ಮಾಡಿದ್ದಾರೆ.
2023ನೇ ಸಾಲಿನ ಯಪಿಎಸ್‌ಸಿ ಪರೀಕ್ಷೆಯಲ್ಲಿ ಧಾರವಾಡ ಮೂಲದ ಸೌಭಾಗ್ಯ ಬೀಳಗಿಮಠ ಅವರು 101ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇದೇ ರೀತಿ ಹುಬ್ಬಳ್ಳಿಯ ಕೃಪಾ ಜೈನ್ ಅವರು 440ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಧಾರವಾಡದ ಸೌಭಾಗ್ಯ ಬೀಳಗಿಮಠ ಅವರಿಗೆ ಮಾರ್ಗದರ್ಶಕರಾಗಿ ನಿಂತವರು ಧಾರವಾಡದ ಕೃಷಿ ವಿವಿಯ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರು. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಲು ಕೋಚಿಂಗ್ ಸೆಂಟರ್‌ಗಳಲ್ಲಿ ಲಕ್ಷಾಂತರ ಹಣ ಸುರಿದು ತರಬೇತಿ ಪಡೆದುಕೊಳ್ಳುವ ರೂಢಿ ಇತ್ತೀಚೆಗೆ ನಡೆಯುತ್ತಿದೆ.
ಕೋಚಿಂಗ್ ಇಲ್ಲದೇ ಮನೆಯಿಂದಲೇ ವಿದ್ಯಾಭ್ಯಾಸ
ಆದರೆ ಹಣ ಖರ್ಚು ಮಾಡಲು ಸಾಧ್ಯವಾಗದಿದ್ದರೂ ಸಹ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲೇ ಅಗತ್ಯ ವಿದ್ಯಾಭ್ಯಾಸ ಸಾಮಗ್ರಿಗಳನ್ನು ಇಟ್ಟುಕೊಂಡು ಓದಿದ್ದಾರೆ ಡಾ. ಅಶ್ವಿನಿ ಅವರು ಗುರುವಾಗಿ ಸಹಾಯ ಮಾಡುವ ಮೂಲಕ ಸೌಭಾಗ್ಯ ಅವರನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿ ವಿವಿ ಸೂಕ್ಷ್ಮ ಜೀವಿ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಅವರು, ಸ್ಪರ್ಧಾತ್ಮಕ ಪರೀಕ್ಷೆ ಓದುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಸಫಲವಾದವರು.
ಹಲವರಿಗೆ ಡಾ.ಅಶ್ವಿನಿ ಮಾರ್ಗದರ್ಶನ
ಸೌಭಾಗ್ಯರಂತೆ ಈ ಹಿಂದೆ 2016ರಲ್ಲಿ ಲಕ್ಕಪ್ಪ ಎಂಬುವವರಿಗೆ ಮಾರ್ಗದರ್ಶನ ನೀಡಿದ್ದರು. ಅವರು ಐಆರ್‌ಎಸ್ ಸೇವೆ ಪಾಸಾಗಿದ್ದರು. ಇದೇ ರೀತಿ ಮನೋಜ್ ಹೆಗಡೆ ಎಂಬುವವರು ಐಪಿಎಸ್ ಪಾಸಾದರು.

ಅದೇ ರೀತಿ ಇಂತಹ ಅನೇಕರು ಬೇರೆ ಬೇರೆ ಪರೀಕ್ಷೆಗಳಲ್ಲಿ ಪಾಸಾಗಿ ಇಂದು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಇದೇ ಅಶ್ವಿನಿ ಅವರು ಮಾರ್ಗದರ್ಶನ ನೀಡಿದ್ದರು.
ಯುಪಿಎಸ್‌ಸಿಯಲ್ಲಿ ಹುಬ್ಬಳ್ಳಿಯ ಕೃಪಾ ಜೈನ್ ಅವರು ಸಹ ಯಾವುದೇ ಕೋಚಿಂಗ್‌ಗೆ ತೆರಳದೇ 440 ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಕುಟುಂಬಕ್ಕೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಸಾಫ್ಟ್‌ವೇರ್ ಕೆಲಸ ಬಿಟ್ಟು ವಿದ್ಯಾಭ್ಯಾಸ
ಕೃಪಾ ಅವರು ಮೂಲತಃ ಎಂಜಿನಿಯರಿಂಗ್ ವೃತ್ತಿ ಆರಂಭಿಸಿದ್ದರು. ಸಿವಿಲ್ ಸರ್ವೀಸ್ ಮಾಡಬೇಕು ಎಂಬ ಮಹದಾಸೆಯಿಂದ ಅವರು ತಮ್ಮ ಕನಸು ನನಸು ಮಾಡಲು ವೃತ್ತಿ ತ್ಯಜಿಸಿದರು. ಯಾವುದೇ ಕೋಚಿಂಗ್ ಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದಲೇ ಬಹುದೊಡ್ಡ ಸಾಧನೆ.
ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಸಿಸ್ಕೋ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2020ರಲ್ಲಿ ಯು.ಪಿ.ಎಸ್.ಸಿ ಮಾಡಲೇಬೇಕೆಂದು ಛಲತೊಟ್ಟ ಛಲಗಾರ್ತಿ ಇವರಲ್ಲಿ ಸಿವಿಲ್ ಸರ್ವೀಸ್ ಕನಸು ನನಸಾಗಿತ್ತು.
ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ಪ್ರಯತ್ನದ ಮೂಲಕ ಅವರು ಕಳೆದ ವರ್ಷದ ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿದ್ದಾರೆ. ಈ ಎರಡು ಕುಟುಂಬಸ್ಥರು, ಸ್ನೇಹಿತರು ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.












Click it and Unblock the Notifications