ಬೆಂಗಳೂರಲ್ಲಿ ಕಟ್ಟಡ ನಿರ್ಮಿಸಲು ಅಡಿಗೆ ₹100 ಲಂಚ ಕೊಡಬೇಕು: ಸಚಿವೆ ಶೋಭಾ ಆರೋಪ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿರುವ ಅವರು ಬೆಂಗಳೂರಿನಲ್ಲಿ ಒಂದು ಬಿಲ್ಡಿಂಗ್ ಕಟ್ಟಬೇಕು ಅಂದ್ರೆ, ಒಂದು ಅಡಿಗೆ 100 ರೂಪಾಯಿ ಲಂಚ ಕೊಡಬೇಕು ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಟ್ಯಾಕ್ಸ್ ವ್ಯವಸ್ಥೆ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಬಿಲ್ಡಿಂಗ್ ಕಟ್ಟಬೇಕು ಅಂದ್ರೆ ಅಡಿಗೆ 100 ರೂಪಾಯಿ ಲಂಚ ಕೊಡಬೇಕಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಕಾನೂನು ವ್ಯವಸ್ಥೆ ಕೂಡ ಸರಿಯಿಲ್ಲ. ರಾಜಾರೋಷವಾಗಿ ಹಸುವಿನ ಕೆಚ್ಚಲು ಕೊಯ್ದವನನ್ನ ಮಾನಸಿಕ ಅಸ್ವಸ್ಥ ಎನ್ನುತ್ತಾರೆ ಎಂದು ಗುಡುಗಿದ್ದಾರೆ.

ಪೊಲೀಸ್ ಠಾಣೆ ಮೇಲೆ ದಾಳಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದೆ. ಎಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡಿದ್ರೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಏಕಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುತ್ತಿದ್ದಾರೆ. ಹಳೆಯ ವಿವಿಗಳಿಗೂ ಹಣ ಕೊಟ್ಟಿಲ್ಲ. ಹಾಗಾದರೆ ಈ ಹೊಸ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರ ಕಥೆ ಏನಾಗಬೇಕು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ ಕೊಡ್ತೀವಿ ಅಂದಿದ್ದರು. ಆದರೆ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿಕೊಡಲು ಸಿದ್ಧವಿದ್ದರೂ ಅದನ್ನು ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಪ್ರತಿದಿನವೂ ಒಂದು ವಸ್ತುಗಳ ಬೆಲೆ ಏರುತ್ತಲೇ ಇದೆ. ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದಿದ್ದೇ ಈ ಗ್ಯಾರಂಟಿಗಳಿಂದ. ಆದರೆ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರಿಗೆ ಬರುತ್ತಿಲ್ಲ. ಉಚಿತ ಬಸ್ ಪ್ರಯಾಣ ಎಂದವರು ಡಿಪೋದಿಂದಲೇ ಬಸ್ ಬಿಡುತ್ತಿಲ್ಲ. ಹಣಕಾಸು ಇಲಾಖೆ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೇ ಗ್ಯಾರಂಟಿ ಹಣ ತಲುಪದ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ ಸೇರಿದಂತೆ ಹಲವು ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರದ್ದು ಬ್ರಿಟಿಷರ ಮನಸ್ಥಿತಿ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಕೇಂದ್ರ ಸರ್ಕಾರದ ಕಡೆ ಕೈತೋರಿಸುವುದನ್ನು ಬಿಟ್ಟು ರಾಜೀನಾಮೆ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಏರಿಸಿರುವ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳಿದ್ದಾರೆ. ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆಯೇ ಈ ದರ ಏರಿಕೆಯಾಗಿದೆ. ಮೆಟ್ರೋ ಅಧಿಕಾರಿಗಳು ದರ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರಬಹುದು. ಆದರೆ, ರಾಜ್ಯ ಸರ್ಕಾರದ ಒತ್ತಡದಿಂದಲೇ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ಕೊಟ್ಟಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.












Click it and Unblock the Notifications