ಸಿದ್ದರಾಮಯ್ಯನವರೇ 2007, 2009 ಹಾಗೂ 2010 ರಲ್ಲಿ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? : ಜೋಶಿ ಪ್ರಶ್ನೆ
ಬೆಂಗಳೂರು, ಜನವರಿ 11: ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಅವಕಾಶವನ್ನ ಕೇಂದ್ರ ತಿರಸ್ಕರಿಸಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯನವರೇ 2007, 2009 ಹಾಗೂ 2010 ರಲ್ಲಿ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿ, ಮಾನ್ಯ ಸಿದ್ದರಾಮಯ್ಯನವರೇ, ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

2015 ರಿಂದ 2023 ವರೆಗೆ ಕರ್ನಾಟಕವು ಪ್ರತಿ ವರ್ಷವೂ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ. 26 ಜನವರಿ 2024 ರ ವರೆಗೆ ಕರ್ನಾಟಕಕ್ಕೆ ಪ್ರದರ್ಶಿಸುವ 14 ಅವಕಾಶಗಳಿದ್ದವು, ಅಂದರೆ ಕೇಂದ್ರದಲ್ಲಿ ಬಿಜೆಪಿ ಇದ್ದಾಗಲೇ 10 ಬಾರಿ ಕರ್ನಾಟಕದ ಸ್ರಬ್ಧಚಿತ್ರ ಪ್ರದರ್ಶನವಾಗಿದೆ.
2007, 2009 ಹಾಗೂ 2010 ರಲ್ಲಿ ಅವಕಾಶ ಸಿಗಲಿಲ್ಲವಲ್ಲ, ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಯಾಕೆ ಪ್ರಶ್ನಿಸಿ ಟ್ವೀಟ್ ಮಾಡಲಿಲ್ಲ, ಯಾಕೆ ಮಾಧ್ಯಮದಲ್ಲಿ ಯಾವ ಹೇಳಿಕೆಯೂ ನೀಡಲಿಲ್ಲ, ಓಹ್ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಅಂತಲೇ? ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಅವಕಾಶ ಕೊಡುವುದು ನಮ್ಮ ಕೈಲಿಲ್ಲ, ಎಲ್ಲವೂ ನ್ಯಾಯ ಬದ್ಧವಾಗಿ ನಡೆದಿದೆ ಹಾಗೂ ಆಯ್ಕೆಗಾಗಿ ಆಯಾ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಹೊಂದಿದ ಸಮಿತಿ ರಚಿಸಲಾಗಿತ್ತು. ಕೇಂದ್ರ ರಾಜ್ಯಗಳ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಲಾಗುವುದಿಲ್ಲ.
ಮಾನ್ಯ ಸಿದ್ದರಾಮಯ್ಯನವರೇ,
— Pralhad Joshi (@JoshiPralhad) January 10, 2024
ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ.
2015 ರಿಂದ 2023 ವರೆಗೆ ಕರ್ನಾಟಕವು ಪ್ರತಿ ವರ್ಷವೂ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ.
26 ಜನವರಿ 2024 ರ ವರೆಗೆ… https://t.co/Ct6ZpSP55w
ಒಬ್ಬ ಮುಖ್ಯಮಂತ್ರಿಯಾಗಿ ನಮ್ಮ ಸ್ತಬ್ಧಚಿತ್ರವನ್ನು ಮೊದಲು ಪ್ರದರ್ಶನ ಮಾಡಲು ಬಿಡಲಿಲ್ಲ, ಅವಮಾನವಾಯಿತು ಎಂದು ಹೇಳುವುದು ತರವಲ್ಲ. ರೀ ಸಿದ್ದರಾಮಯ್ಯನವರೇ, ಉಚಿತ ಕೊಡುತ್ತೇವೆ ಎಂದು ಸುಳ್ಳು ಹೇಳಿ ಕರ್ನಾಟಕ ಜನತೆಯ ದಿಕ್ಕು ತಪ್ಪಿಸಿದ್ದು ಸಾಲದು ಅಂತ ಈಗ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ ಎಂದು ಪ್ರಹ್ಲಾದ್ ಜೋಶಿ ಅವರು ವಾಗ್ದಾಳಿ ನಡೆಸಿದ್ದಾರೆ.
ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ.
ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.

ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ತಬ್ಧಚಿತ್ರ, ನೆಲದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗಗೈದ ಅಪ್ರತಿಮ ದೇಶಪ್ರೇಮಿ ರಾಣಿ ಚೆನ್ನಮ್ಮ ಅವರ ಸ್ತಬ್ಧಚಿತ್ರ, ಕರುನಾಡಿನ ಪ್ರಾಕೃತಿಕ ಸೌಂದರ್ಯ ಮತ್ತು ಬ್ರಾಂಡ್ ಬೆಂಗಳೂರು ಹೀಗೆ 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ.
ಕನ್ನಡ-ಕನ್ನಡಿಗ ಮತ್ತು ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದಿಂದ ಕನ್ನಡಿಗರು ಈಗಾಗಲೇ ರೋಸಿಹೋಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಹೋಗಬಾರದು.
ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications