BJP: ಕರ್ನಾಟಕದ ವಿರೋಧ ಪಕ್ಷದ ಒಳಗೊಂದು ವಿರೋಧ ಪಕ್ಷ, ಟಾರ್ಗೆಟ್ ವಿಜಯೇಂದ್ರ!
ಕರ್ನಾಟಕದಲ್ಲಿ ಒಂದು ವಿರೋಧ ಪಕ್ಷ ಇದೆ ಅಂತ ನೀವು ಅಂದಕೊಂಡಿದ್ದರೆ ಅದು ತಪ್ಪು. ಇಲ್ಲ ಎರಡು ಇದೆ ಬಿಜೆಪಿ - ಜೆಡಿಎಸ್ ಇದೆಯಲ್ಲ ಅಂದುಕೊಂಡ್ರೆ ಅದು ಕೂಡ ತಪ್ಪು. ಹೌದು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ವಿರೋಧ ಪಕ್ಷಗಳಾಗಿ ಪ್ರತಿನಿಧಿಸುತ್ತಿರುವುದೇನೋ ನಿಜ. ಆದರೆ, ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ಒಳಗೇ ಒಂದು ವಿರೋಧ ಪಕ್ಷವಿದೆ. ಅದು ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗುತ್ತಿದ್ದು, ಬಿಜೆಪಿಗೆ ಮುಜುಗರವನ್ನು ಉಂಟು ಮಾಡುತ್ತಿದೆ. ಅದರ ವಿವರ ಇಲ್ಲಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಹಾಗೂ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಬಿಜೆಪಿಯಲ್ಲಿ ಒಂದು ಬಣ ಮೊದಲಿನಿಂದಲೂ ಅಸಹಕಾರ ಚಳವಳಿಯನ್ನು ಮುಂದುವರಿಸಿಕೊಂಡೇ ಬರುತ್ತಿದೆ. ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರುವುದನ್ನು ಈ ಬಣ ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ. ವಿಜಯೇಂದ್ರ ಅಧಿಕಾರದ ಗದ್ದುಗೆಯನ್ನು ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲೇ ಬಂಡಾಯದ ಕೂಗು ಕೇಳಿಬಂದಿತ್ತು. ಯಾವ ಮಟ್ಟಕ್ಕೆ ಎಂದರೆ ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಂದಾಗಿರುವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿಯನ್ನು ತೊರೆದಿದ್ದರು. ಅಲ್ಲದೇ ಸ್ವಾತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಮೂಲಕ ತಾವು ರಾಜಕೀಯವಾಗಿ ಬೆಳೆದ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಅವರೊಂದಿಗೆ ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಗಳಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಹ ಬಿ.ವೈ ವಿಜಯೇಂದ್ರ ಅವರನ್ನು ತೀವ್ರವಾಗಿ ವಿರೋಧಿಸಿದ್ದರು. ಇದೀಗ ಬಿಜೆಪಿಯ ಒಳಗೆ ವಿರೋಧಿ ಬಣದ ಸಂಖ್ಯೆ ಹೆಚ್ಚಾಗುತ್ತಿದ್ದು. ಈ ಮೂಲಕ ಬಿಜೆಪಿಯ ವಿರೋಧ ಪಕ್ಷದ ಒಳಗೇ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿದೆ.

ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು
ವಿರೋಧ ಪಕ್ಷದ ಒಳಗಿನ ಬಣ ರಾಜಕೀಯಕ್ಕೆ ಹೊಸ ಸೇರ್ಪಡೆ ಆಗಿರುವುದು ಬಿಜೆಪಿಯ ಪ್ರಮುಖ ಮುಖಂಡ ಪ್ರತಾಪ್ ಸಿಂಹ. ಇವರೂ ಕೂಡ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ವಿರೋಧಿ ಬಣ ಅಥವಾ ಭಿನ್ನಮತದ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ.ಪಿ ಹರೀಶ, ಜಿ.ಎಂ ಸಿದ್ದೇಶ್ವರ ಸೇರಿದಂತೆ ಹಲವರು ಭಿನ್ನಮತದ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಾಗೂ ಆರ್‌ಎಸ್‌ಎಸ್ ನಾಯಕರ ಮಾತು, ಎಚ್ಚರಿಕೆಗಳಿಗೂ ಈ ಬಣ ಕ್ಯಾರೇ ಎನ್ನದೆ ಇರುವುದು ಅಚ್ಚರಿ ಮೂಡಿಸಿದೆ. ಕೆಲವು ನಾಯಕರಂತು ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.
ಅಡ್ಜೆಸ್ಟ್‌ಮೆಂಟ್, ಪಕ್ಷಪಾತ ಆರೋಪ
ಈ ವಿರೋಧಿ ಬಣದ ಪ್ರಮುಖ ಆರೋಪಗಳೆಂದರೆ ಕೆಲವರು ಬಿಜೆಪಿಯಲ್ಲಿ ಅಡ್ಜೆಸ್ಟ್‌ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ಯಡಿಯೂರಪ್ಪ ಅವರ ಕುಟುಂಬದ ಹಿಡಿತದಿಂದ ಬಿಜೆಪಿ ಮುಕ್ತವಾಗಬೇಕು ಎನ್ನುವುದು. ಯಡಿಯೂರಪ್ಪ ಅವರು ರಾಜಕೀಯವಾಗಿ ಅವರ ಪುತ್ರನನ್ನು ಸ್ಟ್ರಾಂಗ್ ಮಾಡಲು ಬೇಕಾದ ಎಲ್ಲವನ್ನೂ ಮಾಡಿದ್ದಾರೆ ಎನ್ನುವ ಆರೋಪವೂ ಇದೆ. ಅಲ್ಲದೇ ಅಡ್ಜೆಸ್ಟ್‌ಮೆಂಟ್ ರಾಜಕೀಯದಿಂದಲೇ ಈ ಬಾರಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಯಿತು. ನಮಗೆ ಅಧಿಕಾರ ತಪ್ಪುವುದಕ್ಕೆ ಬಿಜೆಪಿಯ ಕೆಲವು ಪ್ರಮುಖ ನಾಯಕರೇ ಕಾರಣ ಎನ್ನುವ ಆರೋಪ ಇದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಗುರಿಯಾಗಿಸಿಕೊಂಡು ಸಹ ಕೆಲವು ವಿರೋಧ ಪಕ್ಷದ ನಾಯಕರು ಮಾತನಾಡಿದ್ದು ಇದೆ. ಆದರೆ, ನೇರವಾಗಿ ಹೆಸರು ಉಲ್ಲೇಖಿಸಿ ಯಾರು ಮಾತನಾಡಿಲ್ಲ. ಬಸನಗೌಡ ಪಾಟೀಲ ಯತ್ನಾಳ ಅವರು ಮಾತ್ರ ಯಡಿಯೂರಪ್ಪ ಅವರ ಹಾದಿಯಾಗಿ ಬಿ.ವೈ ವಿಜಯೇಂದ್ರ ಅವರ ವರೆಗೆ ಎಲ್ಲರನ್ನೂ ಟೀಕಿಸಿದ್ದಾರೆ. ಇದೀಗ ಭಿನ್ನಮತೀಯರ ತಂಡವನ್ನು ಯತ್ನಾಳ ಅವರೇ ಲೀಡ್ ಮಾಡಿದಂತೆ ಆಗುತ್ತಿದೆ. ಯತ್ನಾಳ ಅವರು ತಪ್ಪುಗಳನ್ನು ನೇರವಾಗಿ ಹಾಗೂ ನಿಷ್ಠುರವಾಗಿ ಹೇಳುವುದು ಸಹ ಇದಕ್ಕೆ ಕಾರಣವಾಗಿದೆ.












Click it and Unblock the Notifications