E-Khata: ಗ್ರಾಮೀಣ ಅನಧಿಕೃತ ಆಸ್ತಿಗಳು ಇ ಖಾತಾ ವ್ಯಾಪ್ತಿಗೆ
E-Khata: ರಾಜ್ಯದಲ್ಲಿ ಸರ್ಕಾರವು ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಇ-ಖಾತಾ ಅಭಿಯಾನ ಹಮ್ಮಿಕೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್-ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯ ಆಸ್ತಿಗಳು ನಕ್ಷೆ ಮಂಜೂರಾತಿ ಪಡೆಯದೇ ಕಂದಾಯ ನಿವೇಶನ ಹಾಗೂ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಇ-ಖಾತಾ ಅಡಿ ತರಲಾಗಿದೆ. ಅದೇ ರೀತಿಯಲ್ಲು ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಇ-ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ತರುವುದಕ್ಕಾಗಿ ವಿಧೇಯಕದಲ್ಲಿ 199ಬಿ ಮತ್ತು 199ಸಿಗೆ ತಿದ್ದುಪಡಿ ತರಲಾಗಿದೆ.

ಸರ್ಕಾರಿ, ಅರಣ್ಯ ಭೂಮಿ, ಸರ್ಕಾರಿ ಒಡೆತನದ ಅಥವಾ ನಿಯಂತ್ರಣ, ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಹೊರತುಪಡಿಸಿದ ಆಸ್ತಿಗಳಿಗೆ ತಾತ್ಕಾಲಿಕ ಖಾತಾ ನೀಡಲಾಗುವುದು. ಗ್ರಾಮ ಪಂಚಾಯಿತಿ ಮಾದರಿ ಕಟ್ಟಡ ಉಪನಿಧಿಗಳ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ ಅಥವಾ ಪರಿವರ್ತನೆಯಾಗದ ಭೂಮಿ ಇಲ್ಲವೇ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿ ಮೇಲಿನ ಅನುಮೋದಿತವಲ್ಲದ ಬಡಾವಣೆ ಅಥವಾ ನಿವೇಶನ ಕಟ್ಟಡ ಸೇರಿ ಪ್ರತಿಯೊಂದು ಕಟ್ಟಡ, ಖಾಲಿ ನಿವೇಶನಗಳಿಗೆ ಬಿ ನಮೂನೆಯ ಇ- ಖಾತಾ ಅನ್ವಯ ಆಗಲಿದೆ.
ತಿದ್ದುಪಡಿ ತಂದು ಅನಧಿಕೃತ ಕಟ್ಟಡ ಮತ್ತು ಪರಿವರ್ತನೆ ಆಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆ ಸ್ವತ್ತುಗಳು ಮೊದಲ ವರ್ಷದ ತೆರಿಗೆ ಎರಡು ಪಟ್ಟು ಪಾವತಿಸಬೇಕಿದೆ. ನಂತರ ವಾರ್ಷಿಕ ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗುತ್ತಿದೆ. ಹಾಗೆಯೇ, ಅಧಿಸೂಚನೆ ಪ್ರಕಟಗೊಂಡ 2 ವರ್ಷಗಳಲ್ಲಿ ಅನಧಿಕೃತ ಆಸ್ತಿಗಳನ್ನು ತೆರಿಗೆ ಪಾವತಿ ವ್ಯವಸ್ಥೆಯೊಳಗೆ ತರುವಂತಾಗಬೇಕು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ಬಿ ಹಾಗೂ ಇ ಖಾತೆ ಹಂಚಿಕೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚು ಆಸ್ತಿಗಳಿದ್ದು, ಬಿ ಹಾಗೂ ಇ ಖಾತಾ ಪಡೆಯಲು ಹೆಚ್ಚೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಅರ್ಜಿ ಸಲ್ಲಿಸಿಕೆ ಮಾಡಿದವರಿಗೆ ಪಾಲಿಕೆಯಿಂದ ಬಿ ಹಾಗೂ ಇ ಖಾತೆ ನೀಡಲಾಗುತ್ತಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿ ಆಸ್ತಿಗಳಿವೆ. ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಬಿ ಹಾಗೂ ಇ ಖಾತಾಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಜಿಎಂ ಅವರು ಬಿ.ಖಾತಾ ನೀಡಲು ಜಿಲ್ಲೆಯ ಎಲ್ಲಾ ಪಿಡಿಓ, ಪುರಸಭೆ, ನಗರಸಭೆ, ಪಾಲಿಕೆಗೆ ಸೂಚಿಸಿದ್ದಾರೆ.
ಆದೇಶ ಬರುತ್ತಿದ್ದಂತೆಯೇ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 450 ಅರ್ಜಿಗಳು ಬಂದಿದ್ದು, ಇನ್ನು ಜಿಲ್ಲೆಯಾದ್ಯಂತ ಮಾಹಿತಿ ಲಭ್ಯ ಆಗಬೇಕಿದೆ. ಈ ಖಾತಾಗಳನ್ನು ನೀಡಲು 10,000 ರೂಪಾಯಿ ನಿಗದಿಪಡಿಸಲಾಗಿತ್ತು. ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ 50 ರೂಪಾಯಿ ಪಡೆದು ಖಾತಾ ನೀಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ .ಜಿ.ಎಂ.ಅವರು, ಬಿ ಖಾತಾ ಮಾಡಲು ಎಲ್ಲಾ ಪಿಡಿಒ, ಪುರಸಭೆ, ನಗರ ಸಭೆ, ಪಾಲಿಕೆಗೆ ಸೂಚನೆ ಕೊಟ್ಟಿದ್ದೇವೆ. ಬಿ ಅಥವಾ ಇ ಖಾತಾ ಮಾಡಲು ಆಂದೋಲನ ಮಾಡಿದ್ದೇವೆ ಎಂದು ಹೇಳಿದರು.












Click it and Unblock the Notifications