KEA: ಯುಜಿನೀಟ್-26: 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಪ್ರಕಟ; ಅ.5ರೊಳಗೆ ಈ ಕೆಲಸ ಮಾಡಿ!
ಬೆಂಗಳೂರು: ರಾಷ್ಟ್ರೀಯ ಅಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ ಪೂರ್ವ 2026ಕ್ಕೆ (UGNEET -26) ಸಂಬಂಧಿಸಿದಂತೆ ಯಾರೆಲ್ಲ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಕಾಯುತ್ತಿದ್ದರೋ ಅವರಿಗೆಲ್ಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್ ನೀಡಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಫಲಿತಾ ಬಿಡುಗಡೆ ಅಪ್ಡೇಟ್ ನೀಡಿದ್ದಾರೆ. ವೈದ್ಯಕೀಯ ಕೌನ್ಸೆಲಿಂಗ್ ಕಮಿಟಿ (MCC೦ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಎರಡೂ ಕಡೆ ಸೀಟು ಪಡೆದು, ಮೂರನೇ ಸುತ್ತಿನಲ್ಲಿ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಕ್ಟೋಬರ್ 5ರಂದು ಮಧ್ಯಾಹ್ನ 12 ಗಂಟೆಯೊಳಗೆ ವೆಬ್ ಸೈಟ್ ನ ಲಿಂಕ್ ನಲ್ಲಿ ಆಯ್ಕೆ-4 ಹಾಕಿ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗಬಹುದು ಎಂದು ಅವರು ತಿಳಿಸಿದರು.

ಸೀಟು ರದ್ದತಿಗೆ ಅ.5 ಕೊನೆ ದಿನ
ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಎಂಸಿಸಿ ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛೆ ಇದ್ದಲ್ಲಿ ಅಕ್ಟೋಬರ್ 5ರಂದು ಮಧ್ಯಾಹ್ನ 12 ಗಂಟೆಯೊಳಗೆ 10 ಸಾವಿರ ರೂಪಾಯಿ ದಂಡ ಕಟ್ಟಿ ರದ್ದುಪಡಿಸಿಕೊಳ್ಳಬಹುದು.
ಇತರ ರಾಜ್ಯಗಳಲ್ಲಿ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಥವಾ ಸಿಕ್ಕಿರುವ ಸೀಟು ಇಲ್ಲದೆ ಕೌನ್ಸೆಲಿಂಗ್ ನಿಂದ ಹೊರ ಹೋಗುವವರು ಕೆಇಎ 3ನೇ ಸುತ್ತಿನ ಸೀಟನ್ನು 10 ಸಾವಿರ ರೂಪಾಯಿ ದಂಡ ಪಾವತಿಸಿ ರದ್ದುಪಡಿಸಿಕೊಳ್ಳಬಹುದು. ಇದಕ್ಕೂ ಅ. 5ರ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಎಂಸಿಸಿಯಿಂದ ಸೀಟು ಪಡೆದವರು ಗಮನಿಸಿ
ವೈದ್ಯಕೀಯ ಕೌನ್ಸೆಲಿಂಗ್ ಕಮಿಟಿ (MCC) ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು, ಕೆಇಎ 3ನೇ ಸುತ್ತಿನಲ್ಲಿ ಸೀಟು ಪಡೆದು, ಅಲ್ಲಿಯೇ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ Confirmation of My KEA Seat ಎಂದು ವಿಷಯ ಬರೆದು ಇ-ಮೇಲ್ ([email protected]) ಮಾಡಬೇಕೆಂದು ಅವರು ತಿಳಿಸಿದರು.
ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್ ನಿಂದ ಹೊರ ಹೋದವರಿಗೆ ನಂತರದ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ರದ್ದುಪಡಿಸಿಕೊಂಡ ನಂತರ ಉಳಿದ ಸೀಟುಗಳನ್ನು ಪುನಃ ಇದೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿ, ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಸುತ್ತಿನ ನಂತರ ಚಾಯ್ಸ್-4 ಆಯ್ಕೆಗೆ ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಅಧಿಕೃತ https://cetonline.karnataka.gov.in/kea/indexnew ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕೆಇಎ ತಿಳಿಸಿದೆ.


Click it and Unblock the Notifications
