ಹಲಾಲ್ ವಿವಾದಕ್ಕೆ ಡೋಂಟ್‌ಕೇರ್: ರಾಜ್ಯದಲ್ಲಿ ಭರ್ಜರಿ ಮಾಂಸ ಖರೀದಿ
ಬೆಂಗಳೂರು, ಏಪ್ರಿಲ್ 03: ರಾಜ್ಯದಲ್ಲಿ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂಬ ವಿಚಾರದಲ್ಲಿ ಭಾರೀ ವಿವಾದಗಳು ನಡೆಯುತ್ತಿದೆ. ಆದರೆ ಈ ಯುಗಾದಿಯ ಹೊಸತೊಡಕು ಸಂದರ್ಭದಲ್ಲಿ ರಾಜ್ಯದ ಜನರ ಮೇಲೆ ಈ ವಿವಾದ ಯಾವುದೇ ಪರಿಣಾಮವನ್ನು ಬೀರಿಲ್ಲ. ಜನರು ಈ ರಾಜಕೀಯ ಆಟಕ್ಕೆ ಡೋಂಟ್‌ಕೇರ್ ಎಂದಿದ್ದು, ರಾಜ್ಯದಲ್ಲಿ ಭರ್ಜರಿಯಾಗಿಯೇ ಮಟನ್ ವ್ಯಾಪಾರ ನಡೆದಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಜನರು ಮಾಂಸ ಖರೀದಿಸಲು ಮಾಂಸದಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ಬೆಳಗ್ಗಿನ ಜಾವ 4 ಗಂಟೆಯಿಂದಲೇ ಜನರು ಮಾಂಸ ಖರೀದಿಗೆ ಸಾಲಿನಲ್ಲಿ ನಿಂತಿದ್ದಾರೆ. ಈ ಮಾಂಸ ಖರೀದಿಯ ವೇಳೆ ಹಲಾಲ್ ಕಟ್ ಆಗಲಿ ಅಥವಾ ಜಟ್ಕಾ ಕಟ್ ಆಗಲಿ ಈ ಬಗ್ಗೆ ಖರೀದಿದಾರರು, ವ್ಯಾಪಾರಿಗಳು ಯಾವುದೇ ಮಾತುಕತೆ ನಡೆಸದಿರುವುದು ಕಂಡು ಬಂದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದಲ್ಲಿ ಭರ್ಜರಿಯಾಗಿ ಮಾಂಸ ಖರೀದಿ ನಡೆದಿದೆ. ಹಾಗೆಯೇ ಈ ವಿವಾದ ಬಗ್ಗೆ ಮಾತನಾಡಲು ಮಾಂಸದ ಅಂಗಡಿಗಳ ಮಾಲೀಕರು ಮತ್ತು ಗ್ರಾಹಕರು ಮುಂದೆ ಬಾರದಿರುವುದು ಕೂಡಾ ಕಂಡು ಬಂದಿದೆ.

"ಹೋದ ವರ್ಷಕ್ಕಿಂತ ಹೆಚ್ಚು ಮಟನ್ ಮಾರಾಟ"
ಇನ್ನು ಎವರ್ ಗ್ರೀನ್ ಮಟನ್ ಸ್ಟಾಲ್‌ನಲ್ಲಿ ಪ್ರತಿ ವರ್ಷ 1300 ಕೆಜಿ ಮಾಂಸ ಯುಗಾದಿ ಸಮಯದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಈ ವರ್ಷ 1500 ಕೆಜಿ ಮಾಂಸ ಮಾರಾಟವಾಗಿದೆ ಎಂದು ಹೇಳುತ್ತಾರೆ ಮಟನ್ ಸ್ಟಾಲ್ ಮಾಲೀಕ ಆಯೂಬ್. ಹೋದ ವರ್ಷಕ್ಕಿಂತ ನಮಗೆ ಈ ವರ್ಷ ಹೆಚ್ಚು ಮಟನ್ ಮಾರಾಟವಾಗಿದೆ ಎಂದು ಹೇಳುವ ಮೂಲಕ ಜನರು ಈ ವಿವಾದಕ್ಕೆ ಸೊಪ್ಪು ಹಾಕಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.
"ಈ ವಿವಾದಗಳಿಂದಾಗಿ ನಮಗೆ ಯಾವುದೇ ನಷ್ಟ ಉಂಟಾಗಿಲ್ಲ. ವ್ಯಾಪಾರವೂ ಕಡಿಮೆ ಆಗಿಲ್ಲ. ನಮ್ಮ ಎಂದಿನ ಗ್ರಾಹಕರು ನಮ್ಮ ಬಳಿಗೆಯೇ ಬಂದು ಮಾಂಸ ಖರೀದಿ ಮಾಡುತ್ತಾರೆ," ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಆಜಾದ್ ಪಾಷ ಸಮೀರ್ ಮಟನ್ ಸ್ಟಾಲ್ ಮಾಲೀಕ ಹೇಳಿದ್ದಾರೆ. ಹಾಗೆಯೇ ಜನರು ಒಳ್ಳೆಯ ಮಾಂಸ ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ, ಹೊರತು ಹಲಾಲ್ ಮಾಂಸ ಕೊಡಿ, ಜಟ್ಕಾ ಮಾಂಸ ಕೊಡಿ ಎಂದು ಕೇಳುತ್ತಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನ ಯಶವಂತಪುರ ಫಿಶ್ ಮಾರ್ಕೆಟ್ನಲ್ಲಿ ಜನರು ಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ದಾಸರಹಳ್ಳಿ ಮತ್ತು ಉಳ್ಳಾಲ ಎರಡು ಹಿಂದವೀ ಮಾರ್ಟ್ ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಹನ್ನೊಂದು ಗಂಟೆಯವರೆಗೆ ಬರೋಬ್ಬರಿ ವ್ಯಾಪಾರ ಆಗಿದ್ದು 3900 ಕೆಜಿ ಮಾಂಸ ಮಾರಾಟವಾಗಿದೆ. 2700 ಕೆಜಿ ಮಟನ್, 950 ಕೆಜಿ ಚಿಕನ್ ಹಾಗೂ 250 ಕೆಜಿ ಮೀನು ಮಾರಾಟವಾಗಿದೆ. ಮಟನ್ ಪ್ರತೀ ಕೆ.ಜಿಗೆ 700 ರೂ ನಿಂದ 800 ರೂ ನಂತೆ ಅಂತೆ ಮಾರಾಟವಾಗಿದ್ದರೆ, ಚಿಕನ್ 160 ರಿಂದ 210 ರವರೆಗೆ ಮಾರಾಟವಾಗಿದೆ.












Click it and Unblock the Notifications