ಉಡುಪಿಯಿಂದ ಬ್ರೇಕಿಂಗ್: ಚುನಾವಣಾ ಕಣಕ್ಕೆ ಅಷ್ಟಮಠದ ಸ್ವಾಮೀಜಿ
ಉಡುಪಿ, ಮಾ 10: ತೀರಾ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಉಡುಪಿ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಶನಿವಾರ ( ಮಾ 10) ಮಾತನಾಡುತ್ತಿದ್ದ ಶಿರೂರು ಶ್ರೀಗಳು, ಚುನಾವಣೆಗೆ ನಿಲ್ಲಬೇಕು ಎನ್ನುವುದು ನನ್ನ ಉದ್ದೇಶವಲ್ಲ. ರಾಜಕೀಯ ಪಕ್ಷಗಳು ಜನರ ಸಮಸ್ಯೆಗೆ ಸ್ಪಂದಿಸದೇ ಇರುವುದರಿಂದ, ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಿಜೆಪಿ ಟಿಕೆಟ್ ನೀಡಿದರೆ ಆ ಪಕ್ಷದಿಂದ, ಇಲ್ಲದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಶಿರೂರು ಶ್ರೀಗಳು ಹೇಳಿರುವುದು, ಉಡುಪಿ ರಾಜಕೀಯದ ಚುನಾವಣಾ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆಯಿದೆ.

ಜನಪ್ರತಿನಿಧಿಗಳ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡಲು ನಿರ್ಧರಿಸಿದ್ದೇನೆ. ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದೇನಿಲ್ಲ. ಹಾಲೀ ಶಾಸಕರಾಗಿರುವ ಪ್ರಮೋದ್ ಮಧ್ವರಾಜ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯೋಗಿ ಅದಿತ್ಯನಾಥ್ ನನಗೆ 'ರೋಲ್ ಮಾಡೆಲ್' ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಉಡುಪಿಯ ಬಿಜೆಪಿ ಮುಖಂಡರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಉಡುಪಿ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಿಲ್ಲ. ಹಾಗಾಗಿ, ನನಗೆ ಬಿಜೆಪಿ ಟಿಕೆಟ್ ಸಿಕ್ಕರೆ, ಆ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ.
ಬಿಜೆಪಿ ಬಿಟ್ಟು ಬೇರೆ ಪಕ್ಷದ ಟಿಕೆಟಿನಿಂದ ಸ್ಪರ್ಧಿಸುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದು ನನ್ನ ಅಚಲ ನಿರ್ಧಾರ. ಉಡುಪಿ ಅಷ್ಟಮಠದ ಸಂಪ್ರದಾಯಕ್ಕೆ ವಿರುದ್ದವಾಗಿ ನಾನು ನಡೆದುಕೊಳ್ಳುತ್ತಿಲ್ಲ ಎಂದು ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ಹೇಳಿದ್ದಾರೆ.












Click it and Unblock the Notifications