ಉದಯನಿಧಿ ಸನಾತನ ಧರ್ಮ ವಿವಾದ: ಮೋದಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ಷೇಪ
ಬೆಂಗಳೂರು, ಸೆಪ್ಟೆಂಬರ್ 7: ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ'' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ. ವಿಷಯ - ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿ ಮಾಡಿದರೂ ಅಪರಾಧವೇ ಆಗುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಇನ್ನೂ ಆರ್.ಎಸ್.ಎಸ್ ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ @narendramodi ಅವರ ಹಿಂದಿನ ನಡವಳಿಕೆಗಳನ್ನು ಗಮನಿಸಿದರೆ ಅವರ ಈಗಿನ ಹೇಳಿಕೆಗಳು ಅಚ್ಚರಿ ಹುಟ್ಟಿಸುವುದಿಲ್ಲ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಡೆದುಕೊಂಡ ರೀತಿಯ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರೇ ಅಸಮಾಧಾನ ವ್ಯಕ್ತಪಡಿಸಿ, ರಾಜಧರ್ಮ ಪಾಲಿಸಲು ಕರೆ ಕೊಟ್ಟಿದ್ದರು.
— Siddaramaiah (@siddaramaiah) September 7, 2023
ದಿವಂಗತ…
ಇದಲ್ಲದೆ ಗುರುವಾರ ಇಂದು ಮಾಜಿ ಕೇಂದ್ರ ಸಚಿವ ಎ ರಾಜಾ ಅವರು ಸನಾತನ ಧರ್ಮವು ಎಚ್‌ಐವಿ, ಕುಷ್ಠರೋಗವಿದ್ದಂತೆ. ಸನಾತನದ ಧರ್ಮವು ಸಾಮಾಜಿಕ ಕಳಂಕವಾಗಿದೆ. ಇದು ಎಚ್‌ಐವಿ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಸಮಾನವಾಗಿದೆ. ಉದಯನಿಧಿ ಹೇಳಿರುವ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಮಾಜದಲ್ಲಿ ಅಸಹ್ಯಕರವಾಗಿ ನೋಡಲಾಗುವ ಎಚ್‌ಐವಿ ಹಾಗೂ ಕುಷ್ಠರೋಗದಂತೆ ಸನಾತನ ಧರ್ಮವು ಸಾಮಾಜಿಕ ಪಿಡುಗಾಗಿದೆ' ಎಂದು ಡಿಎಂಕೆ ಸಂಸದ ಎ ರಾಜಾ ಹೇಳಿದ್ದಾರೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎಂಕೆ ನಾಯಕನಿಗೆ ತಕ್ಕ ಉತ್ತರ ನೀಡುವಂತೆ ಪ್ರಧಾನಿ ಮೋದಿ ಬಿಜೆಪಿ ಸಚಿವರಿಗೆ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ಮತಬ್ಯಾಂಕ್ ಹಾಗೂ ತುಷ್ಟೀಕರಣ ರಾಜಕೀಯಕ್ಕಾಗಿ 'ಸನಾತನ ಧರ್ಮ'ವನ್ನು ಉದಯನಿಧಿ ಅವಮಾನಿಸಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬೆಂಬಲಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮನುಷ್ಯನ ಘಟನೆ ಹಾಗೂ ಸಮಾನತೆಯನ್ನು ಪ್ರತಿಪಾದಿಸದೇ ಇರುವುದು ಧರ್ಮವೇ ಅಲ್ಲ ಎಂದು ಹೇಳಿದ್ದಾರೆ. ಉದಯನಿಧಿ ಸ್ಟಾಲಿನ್ ಹಾಗೂ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ದೇಶದ ಹಲವು ಕಡೆಗಳಲ್ಲಿ ದೂರು ದಾಖಲಾಗಿವೆ.












Click it and Unblock the Notifications