ಮದುವೆಯಲ್ಲಿ ಕದಿಯಲು ಬಂದಿದ್ದವರಿಗೆ ಬಿತ್ತು ಗೂಸಾ
ಕಾಸರಗೋಡು, ಆ.5 : ಮದುವೆಗೆ ಸಂಬಂಧಿಕರಂತೆ ಬಂದು ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಭಾನುವಾರ ರಾತ್ರಿ ಮಂಜೇಶ್ವರದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಮಧುವಿನ ಒಡವೆ ಕಳವು ಮಾಡುವಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಕಾಸರಗೋಡು ಸಮೀಪದ ಕಂಜುಟ್ಟೂರಿನಲ್ಲಿರುವ ಮಾಸ್ಕೋ ಯುನಿಟಿ ಹಾಲ್ ನಲ್ಲಿ ಭಾನುವಾರ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಸಂಬಂಧಿಕರ ಸೋಗಿನಲ್ಲಿ ನುಗ್ಗಿದ ಇಬ್ಬರು ಮಹಿಳೆಯರು ವಧುವಿನ ಕೋಣೆಗೆ ಹೋಗಿ, ಅಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಕದಿದ್ದರು.

ಮಹಿಳೆಯರು ಚಿನ್ನ ಕದಿಯುವುದನ್ನು ನೋಡಿದ್ದ ಮಧುವಿನ ಕಡೆಯವರು ಅವರನ್ನು ವಿಚಾರಣೆ ಮಾಡಿದಾಗ ಅವರು ಕದ್ದಿಲ್ಲ ಎಂದು ಹೇಳಿದ್ದರು. ಸಂಬಂಧಿಕರೆಲ್ಲಾ ಸೇರಿ ಇಬ್ಬರು ಮಹಿಳೆಯರಿಗೆ ಥಳಿಸಿ ಅವರ ಬ್ಯಾಗಿನಲ್ಲಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. [ಮಂಜೇಶ್ವರದಲ್ಲಿ ನಾಗರ ಪಂಚಮಿ ಸಂಭ್ರಮ]
ಘಟನೆ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ ವಧುವಿನ ಕಡೆಯವರು ಅವರನ್ನು ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಯುನಿಟಿ ಹಾಲ್ ಗೆ ಆಗಮಿಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರು ಕಾಸರಗೋಡು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಿಂದ ಸಂಬಂಧಿಕರ ಸೋಗಿನಲ್ಲಿ ವಿವಾಹಕ್ಕೆ ತೆರಳಿ ಈ ಮಹಿಳೆಯರು ಹಲವು ಕಡೆ ಕಳುವು ಮಾಡಿರುವ ಅಂಶ ತಿಳಿದುಬಂದಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.


Click it and Unblock the Notifications
