HMPV: ಕರ್ನಾಟಕದಲ್ಲಿ 2 ಎಚ್ಎಂಪಿವಿ ಕೇಸ್ ದೃಢಪಡಿಸಿದ ICMR: ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್?
ಚೀನಾದಲ್ಲಿ ಬೆಚ್ಚಿಬೀಳಿಸಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ವೈರಸ್ ಭಾರತಕ್ಕೂ ಕಾಲಿಟ್ಟಿರುವುದು ದೃಢವಾಗಿದೆ. ದೇಶದಲ್ಲೇ ಮೊದಲ ಕೇಸ್ ಕರ್ನಾಟಕದಲ್ಲೇ ದೃಢವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲೇ ಈವರೆಗೆ ಎರಡು ಎಚ್‌ಎಂಪಿವಿ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೂಡ ಅಧಿಕೃತವಾಗಿ ದೃಢಪಡಿಸಿದೆ.
ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೊದಲಿಗೆ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿರುವುದು ವರದಿಯಾಗಿತ್ತು. ಇದೀಗ ಇದೇ ಆಸ್ಪತ್ರೆಯಲ್ಲಿ ಮತ್ತೊಂದು ಮಗುವಿನಲ್ಲೂ ಎಚ್‌ಎಂಪಿವಿ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಅಲರ್ಟ್ ಆಗಿ, ಆರೋಗ್ಯ ಇಲಾಖೆಯೊಂದಿಗೆ ತುರ್ತು ಸಭೆಯನ್ನು ಕರೆದಿದೆ.

ಸರ್ಕಾರದ ಮಟ್ಟದಲ್ಲಿ ತುರ್ತು ಸಭೆ ನಡೆಯುತ್ತಿದ್ದು, ಮುಂದೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತುರ್ತು ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನು ಎಚ್‌ಎಂಪಿವಿ ವೈರಸ್ ಅನ್ನು ಮಹಾಮಾರಿ ಎಂದು ಕರೆಯಲಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲೇ ಮೊದಲ ಹಾಗೂ ಎರಡನೇ ಕೇಸ್ ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಕೆಲ ತಜ್ಞರು ಮೊದಲಿಗೆ ಈ ವೈರಸ್ ಅನ್ನು ಸರ್ವೇ ಸಾಮಾನ್ಯ ಎನ್ನುತ್ತಿದ್ದರೂ, ಈ ಹಿಂದೆ ವಕ್ಕರಿಸಿದ್ದ ಕೋವಿಡ್-19 ಕೂಡ ಇದೇ ಮಾದರಿಯಲ್ಲಿ ಮೊದಲಿಗೆ ಸೈಲೆಂಟ್ ಆಗಿತ್ತು. ಬಳಿಕ ಇಡೀ ಜಗತ್ತನ್ನೇ ಕೋವಿಡ್ ಅಲುಗಾಡಿಸಿತ್ತು. ಸದ್ಯ ಈ ವೈರಸ್ ಕೂಡ ಚೀನಾದಿಂದಲೇ ಕಾಣಿಸಿಕೊಂಡಿರುವುದರಿಂದ ಕೋವಿಡ್‌ನಂತೆಯೇ ಮಾರಕ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಕೋವಿಡ್ ಬಂದ ಸಂದರ್ಭದಲ್ಲಿ ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದ್ದಕ್ಕಿಂದ್ದಂತೆ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಅಷ್ಟೊತ್ತಿಗಾಗಲೇ ಕೋವಿಡ್ ಸೋಂಕು ಹಲವರಲ್ಲಿ ಪತ್ತೆಯಾಗಿತ್ತು. ಸರ್ಕಾರ ಎಚ್ಚೆತ್ತುಕೊಳ್ಳುವ ಮುನ್ನವೇ ಕೋವಿಡ್ ಕೇಸ್‌ಗಳು ಅಬ್ಬರಿಸಿತ್ತು. ಈ ವೇಳೆ ಸೋಂಕು ದೃಢಪಟ್ಟ ಹಲವರು ಕೊನೆಯುಸಿರೆಳೆದಿದ್ದರು. ಕೆಲವರು ಚೇತರಿಸಿಕೊಂಡಿದ್ದರು.
ಸದ್ಯ ಎಚ್‌ಎಂಪಿವಿ ವೈರಸ್ ಕೂಡ ಕೋವಿಡ್‌ನಂತೆಯೇ ಹೋಲುತ್ತಿರುವ ಕಾರಣ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೋವಿಡ್‌ನಂತೆ ಈಗಲೂ ರಾಜ್ಯದಲ್ಲಿ ಹಲವು ಬಿಗಿ ನಿಯಮಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಸಭೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಕೂಡ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಂದೇ ದಿನ ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ವೈರಸ್ ಕೇಸ್‌ಗಳು ಪತ್ತೆಯಾಗಿರುವುದು ಹಾಗೂ ರಾಜ್ಯ ಸರ್ಕಾರ ತುರ್ತು ಸಭೆ ನಡೆಸುತ್ತಿರುವ ಕಾರಣ ಎಲ್ಲರ ಚಿತ್ತ ರಾಜ್ಯ ಸರ್ಕಾರದ ನಿರ್ಧಾರದತ್ತ ಇದೆ. ವೈರಸ್ ಪ್ರಕರಣಗಳು ಹೆಚ್ಚಾಗುವ ಮುನ್ನವೇ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ, ರಾಜ್ಯದ ಆಸ್ಪತ್ರೆಗಳಲ್ಲಿ ಎಚ್‌ಎಂಪಿವಿ ವೈರಸ್ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡುವ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಸಭೆ ಬಳಿಕ ಗೊತ್ತಾಗಲಿದೆ.












Click it and Unblock the Notifications