ಕರ್ನಾಟಕದ ಈ ಜಿಲ್ಲೆಗೆ ಭರ್ಜರಿ ಗುಡ್ನ್ಯೂಸ್: 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು!
ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದಿದೆ. ಜನರ ಆಶಯಕ್ಕೆ ತಕ್ಕಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ಅಲ್ಲದೆ ತುಮಕೂರು ಮಹಾನಗರಪಾಲಿಕೆ ಒಳಗೊಂಡಂತೆ ಜಿಲ್ಲೆಯ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ವಿವಿಧ ಸರ್ವೇ ನಂಬರ್ಗಳಲ್ಲಿ ಒಟ್ಟಾರೆ 192 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ತಾವು ಬೆಳೆದ ರೇಷ್ಮೆ ಗೂಡುಗಳಿಗೆ ಗರಿಷ್ಠ ಧಾರಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2,974 ಮೆ.ಟನ್ ದ್ವಿತಳಿ ಗೂಡು ಹಾಗೂ 5,008 ಮೆ.ಟನ್ ಒಟ್ಟು ಗೂಡು ಉತ್ಪಾದಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.

ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 4 ತಾಲೂಕುಗಳ ಒಟ್ಟು 77 ಗ್ರಾಮಗಳ ಮೂಲಕ 104.02 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 1,396 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಶೇಕಡ 99.9ರಷ್ಟು ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 2 ತಾಲೂಕುಗಳ ಒಟ್ಟು 35 ಗ್ರಾಮಗಳ ಮೂಲಕ 58.69 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 845 ಎಕರೆ ಜಮೀನಿನ ಪೈಕಿ ಈವರೆಗೂ 816 ಎಕರೆ ಅಂದರೆ ಶೇಕಡ 97ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ.
ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಒಟ್ಟು 197 ಗ್ರಾಮಗಳ ಮೂಲಕ 163 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಅವಶ್ಯಕವಾದ 3,118 ಎಕರೆ ಜಮೀನಿನ ಪೈಕಿ ಶೇ.97ರಷ್ಟು ಭೂ ಸ್ವಾಧೀನಪಡಿಸಿಕೊಂಡು ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಹೇಮಾವತಿ ನಾಲಾ ಯೋಜನೆಯು ಜಿಲ್ಲೆಯ ಕೆರೆಗಳಿಗೆ ಅಂತರ್ಜಲ ಉತ್ತೇಜನಕ್ಕಾಗಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ 5 ತಾಲ್ಲೂಕುಗಳ ಒಟ್ಟು 94 ಗ್ರಾಮಗಳಿಗೆ ನೀರೊದಗಿಸಲು ಲಿಂಕ್ ಕೆನಾಲ್ ಯೋಜನೆ ಸೇರಿ ಒಟ್ಟು 515 ಎಕರೆ ಜಮೀನಿನ ಪೈಕಿ ಶೇಕಡ 75ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭೂ ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಾ ಭಿವೃದ್ಧಿಗಾಗಿ ಒಟ್ಟು 5 ಹಂತಗಳಲ್ಲಿ ಶಿರಾ ತಾಲ್ಲೂಕು ಸೇರಿದಂತೆ ತುಮಕೂರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗಾಗಿ ಒಟ್ಟು 10,151 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಸ್ವಾಧೀನಗೊಂಡ ಜಮೀನುಗಳಿಗೆ ಈವರೆವಿಗೆ ಒಟ್ಟು 1,168 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದ್ದು, 6ನೇ ಹಂತದ 4,731 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಜೆಎಂಸಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಕಲಿ ದಾಖಲೆಗಳನ್ನು ತಡೆಗಟ್ಟುವುದು ಹಾಗು ಸಾರ್ವಜನಿಕರು ಕಚೇರಿಗೆ ಹೋಗದೆ ಸರಳವಾಗಿ ದಾಖಲೆಗಳ ಪ್ರತಿಗಳನ್ನು ಪಡೆಯಲು ಜಾರಿಗೆ ತಂದಿರುವ ʼಭೂ ಸುರಕ್ಷಾ ಯೋಜನೆʼಯಡಿ ಈವರೆಗೆ 2.17 ಕೋಟಿ ಪುಟಗಳು ಸ್ಕ್ಯಾನ್ ಮಾಡಲಾಗಿದ್ದು, ಈವರೆಗೂ ಸ್ಕ್ಯಾನ್ ಆಗಿರುವ 1,42,268 ಪುಟಗಳ ದಾಖಲೆಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕವೇ ನೀಡಲಾಗಿದೆ ಎಂದು ತಿಳಿಸಿದರು.
ʼಹಕ್ಕುಪತ್ರ ವಿತರಣಾ ಅಭಿಯಾನʼದಡಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ರಚಿಸಲು ಈವರೆಗೂ ಗುರುತಿಸಲಾಗಿರುವ ದಾಖಲೆ ರಹಿತ 1,312 ಜನವಸತಿ ಪ್ರದೇಶಗಳ ಪೈಕಿ ಈವರೆಗೂ ಸರ್ಕಾರದಿಂದ 945 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹಾಗೂ 848 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯಾಗಿದೆ. ಉಳಿದ ಗ್ರಾಮಗಳು ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು.
ಈವರೆಗೂ 22,067 ಅರ್ಹ ಫಲಾನುಭವಿಗಳ ಹಕ್ಕುಪತ್ರಗಳನ್ನು ಗಣಕೀಕರಣಗೊಳಿಸಲಾಗಿದ್ದು, ಮೇ 19ರಂದು ನಡೆದ ಕಂದಾಯ ಬೃಹತ್ ಸಮಾವೇಶದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಸವಲತ್ತು/ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಗಣಕೀಕೃತ ಹಕ್ಕುಪತ್ರಗಳನ್ನು ವಿತರಿಸಿರುವುದು ಗಿನ್ನಿಸ್ ವರ್ಲ್ಡ್ ಬುಕ್ ರೆಕಾರ್ಡ್ನಲ್ಲಿ ದಾಖಲಾಗಿದೆ ಎಂದು ವಿವರಿಸಿದರು.
ಇ-ಪೌತಿ ಆಂದೋಲನ ಬಗ್ಗೆ ಡಾ.ಜಿ ಪರಮೇಶ್ವರ್ ಹೇಳಿದ್ದೇನು
ಇ-ಪೌತಿ ಆಂದೋಲನವನ್ನು ಸರ್ಕಾರವು ಹೊಸ ತಂತ್ರಾಂಶದ ಮೂಲಕ ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಸುಮಾರು ಒಂದು, ಎರಡು ದಶಕಗಳಿಂದ ಅವರ ಪೂರ್ವಿಕರ ಹೆಸರಿನಲ್ಲಿರುವ ಜಮೀನುಗಳನ್ನು ಸರಳವಾಗಿ ಅವರ ವಾರಸುದಾರರಿಗೆ ಖಾತೆ ಮಾಡಬಹುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಅಂಕಿ ಅಂಶಗಳ ಪ್ರಕಾರ ಒಟ್ಟು 5.24ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಈ ಪೈಕಿ 2,25,078 ಅರ್ಜಿಯನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದ ಅವರು, ಇ-ಪೌತಿ ಆಂದೋಲನದಂತಹ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
2025-26ನೇ ಸಾಲಿನಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 26 ಕೈಗಾರಿಕೆಗಳು ಅನುಮೋದನೆಯಾಗಿದ್ದು, ಅನುಷ್ಠಾನ ಹಂತದಲ್ಲಿರುತ್ತವೆ. ಈ ಕೈಗಾರಿಕೆಯಿಂದ ಜಿಲ್ಲೆಗೆ ಒಟ್ಟು 1185.91 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಸದರಿ ಕೈಗಾರಿಕೆಗಳಿಂದ ಒಟ್ಟು 7,286 ನೇರ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದ ವತಿಯಿಂದ ನಡೆದ Global Investors Meet-2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಲ್ಲಿ 7 ಬೃಹತ್ ಮತ್ತು ಭಾರಿ ಕೈಗಾರಿಕೆ ಆರಂಭಿಸಲು MOU ಮಾಡಿಕೊಂಡಿರುತ್ತಾರೆ. ಈ ಕೈಗಾರಿಕೆಗಳಿಂದ ಒಟ್ಟು 75,480 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ ಹಾಗೂ 29,200 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದ 2ನೇ ಹಂತದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ವಿಕಸಿತ ಭಾರತ್ ಗ್ರಾಮೀಣ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ ಯೋಜನೆಯು ದೇಶಾದ್ಯಂತ ಜುಲೈ 1 ರಿಂದ ಪ್ರಾರಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿಯೂ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದ್ದು, 131.90 ಕೋಟಿ ರೂ. ವೆಚ್ಚದಲ್ಲಿ ನೂತನ 300 ಹಾಸಿಗೆಯ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಯಂ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಸತಿ ರಹಿತ ನೌಕರರುಗಳಿಗೆ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಒಟ್ಟು 176 ಮನೆಗಳು ಅನುಮೋದನೆಗೊಂಡಿದೆ. ಪ್ರತಿ ಮನೆಗೆ ಘಟಕ ವೆಚ್ಚ 7.50 ಲಕ್ಷ ರೂ. ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರದಿಂದ 6 ಲಕ್ಷ ರೂ.ಗಳನ್ನು ಭರಿಸಲಾಗುತ್ತದೆ. ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಈವರೆಗೂ 166 ಮನೆಗಳು ಪೂರ್ಣಗೊಂಡಿದ್ದು, ಉಳಿದ 10 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ತುಮಕೂರು ಮಹಾನಗರಪಾಲಿಕೆ ಒಳಗೊಂಡಂತೆ ಜಿಲ್ಲೆಯ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ವಿವಿಧ ಸರ್ವೇ ನಂಬರ್ಗಳಲ್ಲಿ ಒಟ್ಟಾರೆ 192 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಆಶ್ರಯ ಸಮಿತಿಯ ಮೂಲಕ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


Click it and Unblock the Notifications
