ಬೆಂಗಳೂರಿಗೆ ಮತ್ತಷ್ಟು ಹತ್ತಿರವಾಗಲಿದೆ 'ತುಮಕೂರು! ಮೆಟ್ರೋ, ಕೈಗಾರಿಕೆ' ಯೋಜನೆ ಬಗ್ಗೆ ಪರಮೇಶ್ವರ್ ಬಿಗ್ ಅಪ್‌ಡೇಟ್

ತುಮಕೂರು: ಜಿಲ್ಲೆಯನ್ನು ಶಿಕ್ಷಣ, ಕೈಗಾರಿಕೆ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಉದ್ದೇಶ ನನ್ನದು. 20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲಿದ್ದೇವೆ. ತುಮಕೂರಿಗೆ ಮೆಟ್ರೋ ಸಂಪರ್ಕಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಶ್ರೀ ಸಿದ್ಧಗಂಗಾ ಮಠದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತುಮಕೂರಿನ ಆರ್.ಟಿ.ಸಿ. ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮವನ್ನು ಜಿ. ಪರಮೇಶ್ವರ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 'ಸಿರಿಧಾನ್ಯ ಸಂಪದ' ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

Tumakur Metro Connectivity

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. 1926ರಲ್ಲಿ ಪ್ರಾರಂಭವಾದ ಧಾನ್ಯ ವ್ಯಾಪಾರಿಗಳ ಸಂಘವು ನೂರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಸಂಘದ ಹಿಂದಿನ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲು ಈ ಶತಮಾನೋತ್ಸವ ಪ್ರೇರಣೆಯಾಗಲಿ ಎಂದು ಆಶಿಸಿದರು.

ಬರಗಾಲದದಲ್ಲಿ ಅನ್ನದಾನ, ಶಿಕ್ಷಣಕ್ಕೆ ನೆರವು ನೀಡಿದ ಸಂಘ

ತುಮಕೂರು ಹಲವು ದಶಕಗಳಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ವರ್ತಕರು ನಗರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಮಂಡಿಪೇಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಹಾಗೂ ಅಲ್ಲಿನ ವರ್ತಕರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಮಕೂರಿನ ಬೆಳವಣಿಗೆಗೆ ಹೇಗೆ ಪೂರಕವಾಗಿದ್ದವು ಎಂಬುದನ್ನು ಸ್ಮರಿಸಿದರು.

1965-66ರ ಅವಧಿಯಲ್ಲಿ ದೇಶ ತೀವ್ರ ಬರಗಾಲವನ್ನು ಎದುರಿಸಿದಾಗ ಧಾನ್ಯ ವ್ಯಾಪಾರಿಗಳ ಸಂಘವು ಬಡವರಿಗೆ ನೆರವಾಗಲು ಮುಂದಾಗಿತ್ತು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ಬಡವರಿಗೆ ವಿತರಿಸುವುದು ಹಾಗೂ ಅನ್ನದಾನದ ಮೂಲಕ ಹಸಿದವರಿಗೆ ನೆರವಾಗುವಂತಹ ಮಾನವೀಯ ಕಾರ್ಯಗಳನ್ನು ಸಂಘ ಕೈಗೊಂಡಿತ್ತು. ಸಂಕಷ್ಟದ ಸಂದರ್ಭಗಳಲ್ಲಿ ಸಮಾಜದ ನೆರವಿಗೆ ಧಾವಿಸುವ ಸಂಘದ ಈ ಸೇವೆ ಶ್ಲಾಘನೀಯವಾಗಿದೆ. ಸಿದ್ಧಗಂಗಾ ಮಠದ ಪೂಜ್ಯ ಶ್ರೀಗಳು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಸಂದರ್ಭದಲ್ಲಿ ಧಾನ್ಯ ವ್ಯಾಪಾರಿಗಳ ಸಂಘವು ಮಹತ್ವದ ಸಹಕಾರ ನೀಡಿತ್ತು ಎಂದರು.

ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ

ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ತಮ್ಮ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಕಳೆದ ಐದಾರು ವರ್ಷಗಳಿಂದ ಈ ಉದ್ದೇಶಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ. ಯೋಜನೆಯ ವಿವರವಾದ ಕಾರ್ಯಸಾಧ್ಯತಾ ಅಧ್ಯಯನ (Detailed Feasibility Study) ಪೂರ್ಣಗೊಳಿಸಿ, ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲಾಗಿದೆ. ಇದೀಗ ಆಸಕ್ತ ಸಂಸ್ಥೆಗಳಿಂದ ಅಭಿವ್ಯಕ್ತಿ ಆಸಕ್ತಿ (Expression of Interest - EOI) ಆಹ್ವಾನಿಸುವ ಹಂತಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಸಾಕಾರಗೊಂಡರೆ ಬೆಂಗಳೂರು ಮತ್ತು ತುಮಕೂರು ನಗರಗಳ ನಡುವಿನ ಸಂಪರ್ಕ ಹಾಗೂ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಇದರಿಂದ ಎರಡೂ ನಗರಗಳು ಇನ್ನಷ್ಟು ಹತ್ತಿರವಾಗಲಿದ್ದು, ತುಮಕೂರಿನ ಬೆಳವಣಿಗೆಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ ಎಂದು‌ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಯೋಜನೆ ಸಾಕಾರಗೊಳ್ಳಲು ತಮ್ಮ ಅವಧಿಯಲ್ಲಿ ಪ್ರಯತ್ನ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿಯೂ ತುಮಕೂರಿನ ಅಭಿವೃದ್ಧಿಗೆ ವರ್ತಕರ ಸಂಘದ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

ಆಹಾರ ಭದ್ರತೆಯಲ್ಲಿ ವರ್ತಕರ ಕೊಡುಗೆ ಮಹತ್ವದ್ದು

1960, 1970 ಮತ್ತು 1980ರ ದಶಕಗಳವರೆಗೂ ದೇಶದ ಬಹುಸಂಖ್ಯಾತ ಜನರಿಗೆ ದಿನಕ್ಕೆ ಎರಡು ಹೊತ್ತು ಊಟ ದೊರೆಯುವುದೂ ಕಷ್ಟವಾಗಿತ್ತು. 1965ರಿಂದ 1985ರ ಅವಧಿಯಲ್ಲಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಡೆಯಿತು.

ರೈತರು ಬೆಳೆದ ಧಾನ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ವರ್ತಕರ ಸೇವೆ ಅತ್ಯಂತ ಮುಖ್ಯವಾಗಿದೆ. ದೇಶದ ಅಭಿವೃದ್ಧಿ, ರಾಜ್ಯದ ಪ್ರಗತಿ ಹಾಗೂ ಜಿಲ್ಲೆಯ ಬೆಳವಣಿಗೆಯಲ್ಲಿ ಧಾನ್ಯ ವ್ಯಾಪಾರಿಗಳ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜಕೀಯ ಪ್ರವೇಶ ಮತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

ತಮ್ಮ ರಾಜಕೀಯ ಜೀವನವನ್ನು ಸ್ಮರಿಸಿದ ಡಿಸಿಎಂ ಡಾ. ಜಿ. ಪರಮೇಶ್ವರ ಅವರು, ನಾನು ರಾಜಕೀಯಕ್ಕೆ ಬರಬೇಕೆಂದು ಮೊದಲಿನಿಂದಲೂ ನಿರ್ಧರಿಸಿದವರಲ್ಲ ಎಂದು ತಿಳಿಸಿದರು. ಸುಮಾರು 38-39 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸುವ ಮೊದಲು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದೇಶದಲ್ಲಿಯೂ ಕೆಲಸ ಮಾಡಿದ್ದೆ. ಬಳಿಕ ಊರಿಗೆ ಮರಳಿದ ಸಂದರ್ಭದಲ್ಲಿ ತಂದೆಯವರು ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಸ್ಥೆಗಳನ್ನು ಮುಂದುವರಿಸುವಂತೆ ಸೂಚಿಸಿದ್ದರು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಊರಿನಲ್ಲಿಯೇ ಉಳಿದುಕೊಳ್ಳಬೇಕಾಯಿತು.

ನಂತರ ರಾಜಕೀಯ ಪ್ರವೇಶಿಸುವ ಸಂದರ್ಭ ಎದುರಾಗಿ, 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.

ತಾವು ಚಿಕ್ಕವರಿದ್ದಾಗ ತಂದೆಯವರು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯ ಶ್ರೀಗಳ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ ಎಂದು ಡಿಸಿಎಂ ಜಿ.ಪರಮೇಶ್ವರ ಅವರು ಹೇಳಿದರು.

ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.

20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಯೋಜನೆ

ತುಮಕೂರನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು 20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ. ಈ ಯೋಜನೆಯಡಿ ಇನ್ನಷ್ಟು ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಲು ಕಾಲಾವಕಾಶ ಬೇಕಾಗಿದ್ದು, ಅಗತ್ಯ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದರು.

ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು 500ರಿಂದ 1,000 ಎಕರೆವರೆಗೆ ಭೂಮಿ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಉದ್ಯಮಿಯೊಬ್ಬರು ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು ₹80,000 ಕೋಟಿ ಹೂಡಿಕೆ ಮಾಡುವ ಉದ್ದೇಶದೊಂದಿಗೆ 2,000 ಎಕರೆ ಭೂಮಿ ಒದಗಿಸುವಂತೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.

ಟೊಯೋಟಾ ಕಂಪನಿಯ ಪ್ರತಿನಿಧಿಗಳು ತುಮಕೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 300 ಎಕರೆ ಭೂಮಿಯ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. ಜಪಾನೀಸ್ ಟೌನ್‌ಶಿಪ್ ಸ್ಥಾಪನೆಗಾಗಿ ಈಗಾಗಲೇ 500 ಎಕರೆ ಭೂಮಿಯನ್ನು ಒದಗಿಸಲಾಗಿದೆ. ಈ ಯೋಜನೆಗಳೂ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದರು.

ಈ ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ತುಮಕೂರಿನ ಆರ್ಥಿಕ ಬೆಳವಣಿಗೆಗೂ ದೊಡ್ಡ ಉತ್ತೇಜನ ದೊರೆಯಲಿದೆ. ತಾವು ಸಚಿವರಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ತುಮಕೂರಿನ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+