ಹೊಸ ವರ್ಷ ಕಾರು ಓಡಿಸಲು ಕಲಿಯುವುದು ಯೋಜನೆಯೇ?, ಇದನ್ನು ಓದಿ
ಬೆಂಗಳೂರು, ಡಿಸೆಂಬರ್ 14; 2023ನೇ ವರ್ಷ ಮುಗಿದು 2024 ಅನ್ನು ಸ್ವಾಗತಿಸಲು ಜನರು ಸಿದ್ಧರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರು ಮುಂದಿನ ವರ್ಷ ಕಾರು ಓಡಿಸಲು ಕಲಿಯುತ್ತೇನೆ ಎಂಬ ನಿರ್ಣಯವನ್ನು ಸಹ ಮಾಡಿಕೊಂಡಿರುತ್ತಾರೆ. ಆದರೆ ಸರ್ಕಾರ ಇಂತಹ ಜನರ ಜೇಬಿಗೆ ಕತ್ತರಿ ಹಾಕಲಿದೆ.
ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕೋರಿ ಡ್ರೈವಿಂಗ್ ಸ್ಕೂಲ್‌ಗಳು ಪದೇ ಪದೇ ಸರ್ಕಾರಕ್ಕೆ ಮನವಿ ಮಾಡುತ್ತಿದ್ದವು. ಕರ್ನಾಟಕದ ಸಾರಿಗೆ ಇಲಾಖೆ ಈಗ 2024ರ ಜವರಿ 1ರಿಂದಲೇ ಜಾರಿಗೆ ಬರುವಂತೆ ಡ್ರೈವಿಂಗ್ ಸ್ಕೂಲ್‌ಗಳ ಶುಲ್ಕವನ್ನು ಹೆಚ್ಚಳ ಮಾಡಲು ಅನುಮತಿ ನೀಡಿದೆ.

ರಾಜ್ಯದ ವಾಹನ ತರಬೇತಿ ಶಾಲೆಗಳ ಶುಲ್ಕವನ್ನು ಕರ್ನಾಟಕ ಸರ್ಕಾರ ಹೆಚ್ಚಳ ಮಾಡಿದೆ. 2013ರ ಬಳಿಕ ಮೊದಲ ಬಾರಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಕಾರು, ಬೈಕ್, ಆಟೋಗಳನ್ನು ಓಡಿಸಲು ಡ್ರೈವಿಂಗ್ ಸ್ಕೂಲ್‌ಗೆ ಹೋಗುವವರು ಹೆಚ್ಚಿನ ಶುಲ್ಕವನ್ನು ಕಟ್ಟಬೇಕಿದೆ.
ಶುಲ್ಕ ಎಷ್ಟು ಹೆಚ್ಚಳ; ವಿವಿಧ ನಗರಗಳಲ್ಲಿ ಡ್ರೈವಿಂಗ್ ಸ್ಕೂಲ್‌ಗಳ ಶುಲ್ಕದಲ್ಲಿ ವ್ಯತ್ಯಾಸ ಇರಬಹುದು. ತರಬೇತಿ ಪಡೆಯಲು ಬರುವವರಿಗೆ ಎಲ್‌ಎಲ್ ಮತ್ತು ಡಿಎಲ್‌ಗಳನ್ನು ಡ್ರೈವಿಂಗ್ ಸ್ಕೂಲ್‌ಗಳೇ ಮಾಡಿಸಿ ಕೊಡುತ್ತವೆ.
ಕಾರು ಕಲಿಯಲು ಇದ್ದ 4 ಸಾವಿರ ರೂ. ಶುಲ್ಕವನ್ನು 7 ಸಾವಿರಕ್ಕೆ, ಆಟೋ ರಿಕ್ಷಾಕ್ಕೆ ಇದ್ದ 3 ಸಾವಿರ ರೂ. ಶುಲ್ಕವನ್ನು 4 ಸಾವಿರಕ್ಕೆ ಮತ್ತು ಮೋಟರ್ ಸೈಕಲ್ ಕಲಿಯಲು ಇದ್ದ 2,200 ರೂ. ಶುಲ್ಕವನ್ನು 3 ಸಾವಿರ ರೂ.ಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಜನವರಿ 1, 2024ರಿಂದಲೇ ಈ ಆದೇಶ ಜಾರಿಗೆ ಬರುತ್ತದೆ.
ಕಾರು ಕಲಿಯಲು 7 ಸಾವಿರ ಶುಲ್ಕವನ್ನು ಪಾವತಿ ಮಾಡುವ ಜೊತೆಗೆ ಎಲ್‌ಎಲ್‌ಗೆ 350 ರೂ. ಮತ್ತು ಡಿಎಲ್‌ಗೆ 1 ಸಾವಿರ ರೂ.ಗಳನ್ನು ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕಿದೆ. ಆದ್ದರಿಂದ ಹೊಸ ವರ್ಷ ಕಾರು ಕಲಿಯಲು ಹೊರಡುವವರು ಸುಮಾರು 8,350 ರೂ.ಗಳನ್ನು ಪಾವತಿ ಮಾಡಬೇಕಿದೆ.
2013ರ ಬಳಿಕ ವಾಹನ ತರಬೇತಿ ಶಾಲೆಗಳ ಶುಲ್ಕವನ್ನು ಕರ್ನಾಟಕ ಸರ್ಕಾರ ಹೆಚ್ಚಳ ಮಾಡಿರಲಿಲ್ಲ. ಕಾಲಕ್ಕೆ ಅನುಗುಣವಾಗಿ ಪರಿಷ್ಕಣೆ ಮಾಡಲು ಅನುಮತಿ ನೀಡಬೇಕು ಎಂದು ಶಾಲೆಗಳು ಪದೇ ಪದೇ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದವು.
ಜನವರಿ 1ರಿಂದ ಪರಿಷ್ಕೃತ ಶುಲ್ಕವನ್ನು ಪಡೆದು ತರಬೇತಿ ನೀಡಲು ಸಾರಿಗೆ ಇಲಾಖೆ ಒಪ್ಪಿಗೆ ನೀಡಿದೆ. ಪೆಟ್ರೋಲ್, ಡೀಸೆಲ್ ದರಗಳು, ಬಿಡಿಭಾಗಗಳ ದರಗಳು ಏರಿಕೆ ಮುಂತಾದ ದರ ಏರಿಕೆಯನ್ನು ಮುಂದಿಟ್ಟುಕೊಂಡು ವಾಹನ ತರಬೇತಿ ಶಾಲೆಗಳು ಶುಲ್ಕ ಹೆಚ್ಚಳದ ಪ್ರಸ್ತಾಪ ಮುಂದಿಟ್ಟಿದ್ದವು.
ಪದೇ ಪದೇ ವಾಹನ ತರಬೇತಿ ಶಾಲೆಗಳ ಬೇಡಿಕೆ ಸ್ವೀಕಾರ ಮಾಡಿದ್ದ ಸಾರಿಗೆ ಇಲಾಖೆ ಶುಲ್ಕ ಹೆಚ್ಚಳದ ಕುರಿತು ವರದಿ ನೀಡಲು ಇಲಾಖೆಯ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಸೇರಿದಂತೆ ಇತರ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿತ್ತು.
ಈ ಸಮಿತಿ ಪರಿಶೀಲನೆ ನಡೆಸಿ ವಾಹನ ತರಬೇತಿ ಶಾಲೆಗಳ ಶುಲ್ಕವನ್ನು ಪರಿಷ್ಕರಣೆ ಮಾಡಬಹುದು ಎಂದು ಶಿಫಾರಸು ಮಾಡಿ ಎರಡು ವರ್ಷಗಳ ಹಿಂದೆಯೇ ಇಲಾಖೆಗೆ ವರದಿ ಸಲ್ಲಿಕೆ ಮಾಡಿತ್ತು. ಆದರೆ ಸಾರಿಗೆ ಇಲಾಖೆ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈಗ ಮತ್ತೊಮ್ಮೆ ವಾಹನ ತರಬೇತಿ ಶಾಲೆಗಳು ಬೇಡಿಕೆ ಮುಂದಿಟ್ಟ ಕಾರಣದಿಂದ ಸಾರಿಗೆ ಇಲಾಖೆ ಆಯುಕ್ತರು ವರದಿಯನ್ನು ಅಂಗೀಕರಿಸಿ, ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ಶುಲ್ಕವನ್ನು ಏರಿಕೆ ಮಾಡಲು ಅನುಮತಿ ನೀಡಿದ್ದಾರೆ.












Click it and Unblock the Notifications