ADR Report: ರಾಜ್ಯದಲ್ಲಿ ಅತಿ ಶ್ರೀಮಂತ ಮತ್ತು ಬಡ ಅಭ್ಯರ್ಥಿಗಳು ಇವರು : ಈ ಅಭ್ಯರ್ಥಿ ಬಳಿ ಇರೋದು ಬರೀ 500 ರುಪಾಯಿ ಅಂತೆ!
ಕರ್ನಾಟಕ ಚುನಾವಣಾ ಅಖಾಡ ರಂಗೇರಿದೆ, ಎಲ್ಲಾ ಅಭ್ಯರ್ಥಿಗಳು ಗೆಲುವಿಗಾಗಿ ಹರ ಸಾಹಸ ಪಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮತದಾರರಿಗೆ ಹಣ, ಹೆಂಡ, ಕುಕ್ಕರ್ ಹಂಚುವುದು ಕೂಡ ವರದಿಯಾಗಿದೆ, ಇನ್ನೂ ಕೆಲವು ಅಭ್ಯರ್ಥಿಗಳು ಸೈಕಲ್‌ನಲ್ಲಿ ಮತಪ್ರಚಾರ ಮಾಡ್ತಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಎಲ್ಲಾ ಅಭ್ಯರ್ಥಿಗಳು ತಮ್ಮ ಆಸ್ತಿಯ ವಿವರವನ್ನು ಸಲ್ಲಿಸಬೇಕಾಗುತ್ತದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವಿವರಗಳನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ಶ್ರೀಮಂತ ಮತ್ತು ಬಡ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದೆ.

ಕೆಲವು ಅಭ್ಯರ್ಥಿಗಳು ತಮಗೆ ಸಾವಿರಾರು ಕೋಟಿ ರುಪಾಯಿ ಆಸ್ತಿ ಇದೆ ಘೋಷಣೆ ಮಾಡಿಕೊಂಡಿದ್ದರೆ, 14 ಅಭ್ಯರ್ಥಿಗಳು ತಮ್ಮ ಬಳಿ ಒಂದು ರುಪಾಯಿ ಆಸ್ತಿ ಕೂಡ ಇಲ್ಲ ಎಂದು ಘೋಷಿಸಿದ್ದಾರೆ. ಒಬ್ಬ ಅಭ್ಯರ್ಥಿ ತನ್ನ ಬಳಿ 500 ರುಪಾಯಿ ಅಷ್ಟೇ ಇರುವುದು ಎಂದು ಘೋಷಿಸಿಕೊಂಡಿದ್ದಾರೆ.
ಅತ್ಯಂತ ಶ್ರೀಮಂತ ಅಭ್ಯರ್ಥಿಗಳು ಇವರು
ಎಡಿಆರ್ ನೀಡಿರುವ ಮಾಹಿತಿ ಪ್ರಕಾರ ಮೂವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅತ್ಯಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಕೆಜಿಎಫ್ ಬಾಬು ತಮ್ಮ ಬಳಿ 1633 ಕೋಟಿ ರುಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ, 85,69,24,388 ರುಪಾಯಿ ಚರಾಸ್ತಿ ಇದ್ದರೆ, 15,47,97,11,050 ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ.
ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ ನಾಗರಾಜು ತಮ್ಮ ಬಳಿ 1609 ಕೋಟಿ ರುಪಾಯಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 5,36,20,50,279 ರುಪಾಯಿ ಮೌಲ್ಯದ ಚರಾಸ್ತಿ ಇದ್ದರೆ, 10,73,35,93,834 ಸ್ಥಿರಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 1413 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. 2,73,41,60,463 ರುಪಾಯಿ ಮೌಲ್ಯದ ಚರಾಸ್ತಿ ಇದ್ದು, 11,40,38,41,941 ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
ಈ ಅಭ್ಯರ್ಥಿಯ ಬಳಿ ಇರೋದು ಬರಿ 500 ರುಪಾಯಿ ಅಂತೆ!
ಎಲ್ಲರೂ ಕೋಟಿ ಕೋಟಿ ಆಸ್ತಿ ಇದೆ ಎಂದು ಹೇಳಿಕೊಂಡರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ತನ್ನ ಹತ್ತಿರ ಇರೋದು ಬರಿ 500 ರುಪಾಯಿ ಮಾತ್ರ ಎಂದು ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಸಿದ್ಧಪ್ಪ ಬಸಲಿಂಗಪ್ಪ ತೊಗ್ಗಿ ತಮ್ಮ ಹತ್ತಿರ 500 ರುಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಖಾಲಿದ್ ಖಾನ್ ತಮ್ಮ ಬಳಿ 1019 ರುಪಾಯಿ ಮೌಲ್ಯದ ಆಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇ.ಹೆಚ್. ನಾಯಕ್ 5000 ರುಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ 14 ಅಭ್ಯರ್ಥಿಗಳು ತಮ್ಮ ಬಳಿ ಒಂದು ರುಪಾಯಿ ಕೂಡ ಆಸ್ತಿ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.












Click it and Unblock the Notifications