Nandini Ghee: ತಿರುಪತಿ ಲಡ್ಡುಗಾಗಿ ಕರ್ನಾಟಕದ ನಂದಿನಿ ತುಪ್ಪಕ್ಕೆ ಹೆಚ್ಚುವರಿ ಬೇಡಿಕೆ ಇಟ್ಟ ಟಿಟಿಡಿ
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ವಿತರಿಸುವ ಲಡ್ಡು ಪ್ರಸಾದವು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಸಲು ಕಲಬೆರಕೆ ಪದಾರ್ಥಗಳನ್ನ ಬಳಸಿರುವ ಆರೋಪ ಕೇಳಿಬಂದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣ ಸಂಬಂಧ ತಿರುಪತಿ ಲಡ್ಡುಗಾಗಿ ನಕಲಿ ತುಪ್ಪ ಪೂರೈಸಿದ್ದವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ನ ತುಪ್ಪಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ತರಿಸಿಕೊಳ್ಳುತ್ತಿರುವ ಟಿಟಿಡಿಯು ಇದೀಗ ಹೆಚ್ಚುವರಿ ತುಪ್ಪ ಬೇಕು ಎಂದು ಬೇಡಿಕೆ ಇಟ್ಟಿದೆ.
ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ. ನಮ್ಮ ನಂದಿನಿ ಕರುನಾಡಿನ ಹೆಮ್ಮೆ. ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನು ಈಗಾಗಲೇ ಪೂರೈಕೆ ಮಾಡಲಾಗುತ್ತಿದ್ದು, ಹಿಂದಿಗಿಂತಲೂ 1000 ಟನ್ ತುಪ್ಪಕ್ಕೆ ಹೆಚ್ಚುವರಿಯಾಗಿ ಪೂರೈಸಲು ಟಿಟಿಡಿ ಬೇಡಿಕೆಯಿಟ್ಟಿದೆ ಎಂದು ಹೇಳಿದ್ದಾರೆ. ನಮ್ಮ ರಾಜ್ಯದ ಅನ್ನದಾತರು ಶ್ರಮದಿಂದ ಕಟ್ಟಿರುವ ಕೆಎಂಎಫ್‌ನ 'ನಂದಿನಿ ಬ್ರ್ಯಾಂಡ್ʼ ರಾಷ್ಟ್ರಮಟ್ಟದಲ್ಲೂ ಪ್ರಸಿದ್ಧಿಯಾಗಿದೆ. ಜಾಗತಿಕವಾಗಿ ಗ್ರಾಹಕರಿಂದ ನಂದಿನಿ ಉತ್ನನ್ನಗಳಿಗೆ ಉತ್ತಮ ಬೇಡಿಕೆ ದೊರೆಯುತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ ಉತ್ಪನ್ನಗಳಿಗೆ ಸದ್ಯ ದೇಶದೆಲ್ಲೆಡೆ, ಅದರಲ್ಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಪೂರೈಕೆ ಮಾಡುವಂತೆ ಕೇಳಿದೆ ಎಂದು ಸಚಿವ ಕೆ.ವೆಂಕಟೇಶ್ ಕೂಡ ಹೇಳಿದ್ದಾರೆ. ಈ ಹಿನ್ನೆಲೆ ಬೇಡಿಕೆಯನ್ನು ಪೂರೈಸಲು ತುಪ್ಪದ ಉತ್ಪಾದನೆಯನ್ನು ಸಹ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಈ ತಿಂಗಳ ಕೊನೆಯಲ್ಲಿ ಸಭೆ ಕೂಡ ಮಾಡಲಾಗುವುದು ಎಂದಿದ್ದಾರೆ.
ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚು ಉತ್ಪಾದನೆ ಮಾಡಲು ನಿರ್ಧರಿಸಿದ್ದೇವೆ. ಕಳೆದ ದಸರಾ ಮತ್ತು ದೀಪಾವಳಿ ಹಬ್ಬದ ವೇಳೆಯೂ ನಂದಿನಿ ತುಪ್ಪ ಹಾಗೂ ಉತ್ಪನ್ನಗಳು ದಾಖಲೆಯ ಮಾರಾಟ ಕಂಡಿದ್ದವು. ಸುಮಾರು 740 ಮೆಟ್ರಿಕ್ ಟನ್ ನಂದಿನಿ ಉತ್ಪನ್ನ ಕಳೆದ ಬಾರಿ ಮಾರಾಟವಾಗಿತ್ತು. ಈ ಬಾರಿಯ ದಸರಾ ಹಾಗೂ ದೀಪಾವಳಿ ಹಬ್ಬದಲ್ಲೂ 1 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಮಾಡಲು ತಯಾರಿ ನಡೆಸಿದ್ದರು. ಆದರೆ ಮಾರಾಟವಾಗಿದ್ದು 1.80 ಸಾವಿರ ಮೆಟ್ರಿಕ್ ಟನ್‌ನಷ್ಟು ತುಪ್ಪ ಸೇಲ್ ಆಗಿದೆ. ನಮ್ಮ ನಂದಿನಿ ಬ್ರ್ಯಾಂಡ್ ಅನ್ನು ಜನ ಒಪ್ಪಿದ್ದಾರೆ. ಇದರ ಗುಣಮಟ್ಟದಿಂದಲೇ ತಿರುಪತಿಯವರು ಕೂಡ ಹೆಚ್ಚು ತುಪ್ಪ ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಗುಣಮಟ್ಟಕ್ಕೆ ಫಿದಾ ಆದ ಟಿಟಿಡಿ
ತಿರುಪತಿ ಲಡ್ಡು ವಿವಾದದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ ಆಡಳಿತ ಮಂಡಳಿಯು ಕಳೆದ ಡಿಸೆಂಬರ್‌ನಲ್ಲೇ 4,000 ಮೆಟ್ರಿಕ್ ಟನ್ ನಂದಿನಿ ತುಪ್ಪವನ್ನು ಖರೀದಿಸಿತ್ತು. ಲಡ್ಡು ಪ್ರಸಾದದ ರುಚಿ ಬದಲಾದ ಬಗ್ಗೆ ಭಕ್ತರು ಅಸಮಾಧಾನ ಹೊರಹಾಕಿದ ನಂತರ ನಂದಿನಿ ತುಪ್ಪವನ್ನೇ ಲಡ್ಡುಗೆ ಬಳಸಲು ಟಿಟಿಡಿ ನಿರ್ಧರಿಸಿತ್ತು. ಹೀಗಾಗಿ ಆರಂಭದಲ್ಲಿ 350 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎಫ್ ತಿರುಪತಿಗೆ ಪೂರೈಸಿತ್ತು. ಅಲ್ಲದೆ ಹೆಚ್ಚಿನ ಬೇಡಿಕೆ ಬಂದರೂ ನಾವು ಪೂರೈಸುತ್ತೇವೆ ಎಂದು ಭರವಸೆ ನೀಡಿತ್ತು.












Click it and Unblock the Notifications