Tirupati: ತಿರುಪತಿ ತಿಮ್ಮಪ್ಪನಿಗೆ ₹1 ಕೋಟಿ ದೇಣಿಗೆ, ವಜ್ರ-ಚಿನ್ನದ ಪೆಂಡೆಂಟ್ ಕೊಟ್ಟ ಬೆಂಗಳೂರಿನ ಭಕ್ತರು!
ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲದ ವೆಂಕಟೇಶ್ವರನ ಸನ್ನಿಧಿಗೆ ಪ್ರತಿನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ, ದರ್ಶನ ಪಡೆಯುತ್ತಾರೆ. ಭಕ್ತಿಪೂರ್ವಕವಾಗಿ ದೇವರಿಗೆ ಕಾಣಿಕೆ, ದೇಣಿಗೆ ಹಾಗೂ ಇನ್ನಿತರೆ ಸೇವೆಗಳನ್ನು ಸಲ್ಲಿಸುತ್ತಾರೆ. ಇದೀಗ ಬೆಂಗಳೂರಿನ ಭಕ್ತರು ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಉಡುಗೊರೆಗಳನ್ನು ನೀಡಿದ್ದಾರೆ. ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ಜೊತೆಗೆ ದೇವರಿಗೆ ವಜ್ರದಿಂದ ಕೂಡಿದ ಚಿನ್ನದ ಲಕ್ಷ್ಮಿ ಪೆಂಡೆಂಟ್ ನೀಡಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರು ಮೂಲದ ಕೆ.ಎಂ.ಶ್ರೀನಿವಾಸ ಮೂರ್ತಿ ಎಂಬುವವರು ವಜ್ರ ಮತ್ತು ವೈಜಯಂತಿ ಕಲ್ಲುಗಳಿಂದ ಕೂಡಿರುವ ಚಿನ್ನದ ಲಕ್ಷ್ಮಿ ಪೆಂಡೆಂಟ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ. ಇದು 148 ಗ್ರಾಂ ತೂಕವಿದ್ದು, ಬರೋಬ್ಬರಿ ₹25 ಲಕ್ಷ ಬೆಲೆಬಾಳುತ್ತದೆ. ಮತ್ತೊಬ್ಬರು ಕೃಷ್ಣಮೂರ್ತಿ ಎಂಬುವವರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿಗೆ ಒಂದು ಕೋಟಿ ರೂಪಾಯಿ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಕಲ್ಯಾಣ್ ರಾಮನ್ ಕೃಷ್ಣಮೂರ್ತಿ ಅವರು ನೀಡಿರುವ ಈ ಕೋಟಿ ದೇಣಿಗೆಯನ್ನು ಭಕ್ತರ ಅನ್ನ ಪ್ರಸಾದಕ್ಕೆ ಬಳಸುವುದಾಗಿ ಮಾಹಿತಿ ನೀಡಿದೆ.

ಆಗಸ್ಟ್ 15ರಿಂದ ಹೊಸ ರೂಲ್ಸ್
ತಿರುಪತಿಗೆ ಹೋಗುವ ಭಕ್ತರಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದ್ದು, ಆಗಸ್ಟ್ 15ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ತಿರುಪತಿಯ ಅಲಿಪಿರಿ ಟೋಲ್‌ಗೇಟ್ ಮೂಲಕ ತಿರುಮಲಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನಕ್ಕೂ ಇನ್ಮುಂದೆ ಫಾಸ್ಟ್‌ಟ್ಯಾಗ್ ಕಡ್ಡಾಯ ಎಂದು ಹೇಳಲಾಗಿದೆ. ದೇವಾಲಯಕ್ಕೆ ಹೋಗುವ ಪ್ರತಿಯೊಬ್ಬರಿಗೂ ಸುಗಮ ಸಂಚಾರ, ಕಡಿಮೆ ಕಾಯುವಿಕೆ ಮತ್ತು ಪ್ರಯಾಣ ಸುಲಭಗೊಳಿಸಲು, ಟಿಟಿಡಿ ಮತ್ತು ಐಸಿಐಸಿಐ ಬ್ಯಾಂಕ್ ಅಲಿಪಿರಿಯಲ್ಲಿ ಫಾಸ್ಟ್‌ಟ್ಯಾಗ್ ಕೇಂದ್ರವನ್ನು ಸ್ಥಾಪಿಸಿವೆ.
ಅಲಿಪಿರಿ ಟೋಲ್‌ಗೇಟ್ ಮೂಲಕ ತಿರುಮಲಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಪ್ರಿಪೇಯ್ಡ್ ಡಿಜಿಟಲ್ ಸ್ವರೂಪದಲ್ಲಿ ಇ-ಟೋಲ್ ಸಂಗ್ರಹಕ್ಕಾಗಿ FASTag ಅನ್ನು ಕಡ್ಡಾಯಗೊಳಿಸಿದೆ. ಅದರಂತೆ ಅಲಿಪಿರಿ ಚೆಕ್‌ಪೋಸ್ಟ್‌ನಲ್ಲಿ ವಿವಿಧ ವಾಹನಗಳಲ್ಲಿ ಬರುವ ಭಕ್ತರಿಗೆ ಉತ್ತಮ ಸುರಕ್ಷತಾ ಮಾನದಂಡಗಳು, ಜನದಟ್ಟಣೆ ತಡೆಗಟ್ಟುವಿಕೆ ಮತ್ತು ಪಾರದರ್ಶಕ ಸೇವೆಗಳನ್ನು ಒದಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿರುಪತಿ ಟ್ರಸ್ಟ್ ಹೇಳಿದೆ. ತಿರುಮಲ ಪ್ರವೇಶಿಸುವ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ.

ಆಗಸ್ಟ್ 15ರಿಂದ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳನ್ನು ತಿರುಮಲಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ವಾಹನಗಳಿಗೆ ಫಾಸ್ಟ್‌ಟ್ಯಾಗ್ ಇಲ್ಲದವರ ಅನುಕೂಲಕ್ಕಾಗಿ ಅಲಿಪಿರಿ ಚೆಕ್‌ಪೋಸ್ಟ್‌ನಲ್ಲಿ ಫಾಸ್ಟ್‌ಟ್ಯಾಗ್ ವಿತರಣಾ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಟೋಲ್ ಸಂಗ್ರಹದ ನಿಯಮದಲ್ಲಿ ಮಾತ್ರವೇ ಬದಲಾವಣೆಯಾಗುತ್ತಿದ್ದು, ಸದ್ಯ ಅಲಿಪಿರಿ ಟೋಲ್‌ಗೇಟ್‌ನಲ್ಲಿ ಜಾರಿಯಲ್ಲಿರುವ ಭದ್ರತಾ ತಪಾಸಣೆ ಎಂದಿನಂತೆ ಮುಂದುವರಿಯಲಿದೆ.
ತಿರುಮಲಕ್ಕೆ ಸಾಮಾನ್ಯ ದಿನಗಳಲ್ಲಿ ಸುಮಾರು 8000 ವಾಹನಗಳು ಅಲಿಪಿರಿ ಟೋಲ್‌ಗೇಟ್ ಮೂಲಕ ತಿರುಮಲಕ್ಕೆ ಪ್ರವೇಶಿಸುತ್ತವೆ. ವಾರಾಂತ್ಯಗಳು, ರಜಾದಿನಗಳು ಮತ್ತು ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಸುಮಾರು 15,000 ವಾಹನಗಳು ತಿರುಮಲಕ್ಕೆ ಹೋಗುತ್ತವೆ ಎನ್ನಲಾಗಿದೆ. ಅಲಿಪಿರಿ ಟೋಲ್‌ಗೇಟ್‌ನಲ್ಲಿ ಟೋಲ್ ಶುಲ್ಕವನ್ನು ಈಗ ಸ್ಥಳದಲ್ಲೇ ಸಂಗ್ರಹಿಸುವುದರಿಂದ ಸಂಚಾರ ದಟ್ಟಣೆ ಕೂಡ ಉಂಟಾಗುತ್ತಿತ್ತು. ಫಾಸ್ಟ್‌ಟ್ಯಾಗ್ ನಿಯಮ ಜಾರಿಯಾದ ನಂತರ ಇದಕ್ಕೆ ಕಡಿವಾಣ ಬೀಳಲಿದೆ.












Click it and Unblock the Notifications