ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ: ನಟನ ಪ್ರತಿಕ್ರಿಯೆ
ಬೆಂಗಳೂರು; ಕರ್ನಾಟಕದ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಪಿತೂರಿ ಮಾಡಿದ್ದಾರೆಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಕೇಳಿ ಬಂದಿತ್ತು. ಇದನ್ನು ಅವರು ನಿರಾಕರಿಸಿದ ಬೆನ್ನಲ್ಲೇ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಅನ್ನು ಜಾರಿಗೊಳಿಸಿ ಆದೇಶಿಸಿದೆ. ಈ ಮೂಲಕ ನಟ ಪ್ರಕಾಶ್ ರಾಜ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಶೀಘ್ರವೇ ಪೊಲೀಸ್ ಬಂಧನ ಸಾಧ್ಯತೆ ಇದೆ.
ಸದಾ ತಮ್ಮ ಹೇಳಿಕೆಗಳಿಂದ ಒಂದಿಲ್ಲೊಂದು ವಿವಾದದೊಂದಿಗೆ ಗುರುತಿಸಿಕೊಳ್ಳುವ ಜನಪ್ರಿಯ ನಟ ಪ್ರಕಾಶ್ ರಾಜ್ ಅವರ ವಿರುದ್ಧ ಇತ್ತೀಚೆಗೆ ತಿರುಪತಿಯಲ್ಲಿ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತು. ಇದೆಲ್ಲದರ ನಡುವೆ 'ಪ್ರಕಾಶ್ ರಾಜ್ ಒಂದೇ ಹೆಸರಿನಲ್ಲಿ ಮೂರು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿ ಹೊಂದಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನ್ಯಾಯಾಲಯ ಬೇಲ್ ರಹಿತ ವಾರಂಟ್ ಜಾರಿ ಮಾಡಿ ಆದೇಶಿಸಿದೆ.

ಮೂರು ರಾಜ್ಯಗಳಲ್ಲಿ ಗುರುತಿನ ಚೀಟಿ ಆರೋಪ
ಚುನಾವಣೆ ಆಯೋಗದ ಪ್ರಕಾರ, ಒಂದು ದೇಶದಲ್ಲಿ ಒಬ್ಬರಿಗೇ ಒಂದೇ ಮತದಾರರ ಗುರುತಿನ ಚೀಟಿ ಹೊಂದಿರಬೇಕು ಎಂಬ ಕಟ್ಟನಿಟ್ಟಿನ ನಿಯಮ ಇದೆ. ಆದರೆ ಪ್ರಕಾಶ್ ರಾಜ್ ಮೂರು ರಾಜ್ಯಗಳಲ್ಲಿ ಗುರುತಿನ ಚೀಟಿ ಹೊಂದುವ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 31ಮತ್ತು 125(ಎ) ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ. ತಮಿಳುನಾಡಿನ ವಲಚೇರಿ ವಿಧಾನಸಭಾ ಕ್ಷೇತ್ರ, ತೆಲಂಗಾಣ ಸೆರಿಲಿಂಗಪಲ್ಲಿ ವಿಧಾನಸಭಾ ಕ್ಷೇತ್ರ ಮತ್ತು ಕರ್ನಾಟಕದ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸೇರಿ ಒಟ್ಟು ಒಂದೇ ಹೆಸರಿನಲ್ಲಿ ಮೂರು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎನ್ನಲಾಗಿದೆ.
ಶಾಂತಿನಗರದ ಮತದಾನೆಂದು ಉಲ್ಲೇಖ
ಈ ಹಿಂದೆ ಚುನಾವಣೆಗೆ ನಿಂತಿದ್ದ ಪ್ರಕಾಶ್ ರಾಜ್ ತಾವು ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತದಾರ ಎಂದು ಉಲ್ಲೇಖಿಸಿದ್ದರು. ಅವರ ಮೇಲಿನ ಆರೋಪ ಸಂಬಂಧ 2019ರಲ್ಲಿ ದಿಲೀಪ್ ಕುಮಾರ್ ಎಂಬುವವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರ ಬೆನ್ನಲ್ಲೆ 2023ರಲ್ಲಿ ಕೋರ್ಟ್‌ಗೆ ಖಾಸಗಿ ದೂರು ಸಹ ದಾಖಲಿಸಿದ್ದರು.
ಕೆಲವು ನೋಟಿಸ್‌ಗೆ ಉತ್ತರಿಸಿದ ನಟ
ಈ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯ, ನಟ ಪ್ರಕಾಶ್ ರಾಜ್ ಅವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ಆಗ ಪ್ರಕಾಶ್ ರಾಜ್ ಅವರಾಗಲಿ, ಅವರ ಪರ ವಕೀಲರಾಗಲಿ ಸಮನ್ಸ್‌ಗೆ ಉತ್ತರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ನಂತರ ಪ್ರಕರಣ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಅಲ್ಲಿ ಜಾಮೀನು ರಹಿತ ಬಂಧನಕ್ಕೆ ಕೋರ್ಟ್ ಆದೇಶ ಹೊರಡಿಸಿತ್ತು. ಒಟ್ಟು ಈವರೆಗೆ ಮೂರು ಬಾರಿ ಬಂಧನ ರಹಿತ ಜಾಮೀನು ವಾರೆಂಟ್ ಜಾರಿಗೊಳಿಸಲಾಗಿದೆ. ಅವರು ಸ್ಪಂದಿಸದ ಕಾರಣ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದ ಪೊಲೀಸರಿಗೆ ಸೂಚಿಸಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಯಾವ ಕ್ಷಣದಲ್ಲಾದರೂ ಪೊಲೀಸರು ಪ್ರಕಾಶ್ ರಾಜ್ ರನ್ನು ಬಂಧಿಸುವ ಸಾಧ್ಯತೆ ಇದೆ.
ಸುಳ್ಳು ಸುದ್ದಿ ಎಂದ ಪ್ರಕಾಶ್ ರಾಜ್
ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದರ ಕುರಿತು ಭಾನುವಾರ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನೋಟಿಸ್ ಜಾರಿ ವೈರಲ್ ಆಗುತ್ತಿದ್ದಂತೆ ಆ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವು ಫೇಕ್ ಸುದ್ದಿ ಎಂದು ಹೇಳಿದ್ದಾರೆ. ಮಾರಿಕೊಂಡ ಮಾಧ್ಯಮಗಳು ಈ ರೀತಿ ವರದಿ ಮಾಡಿವೆ ಎಂದು ದೂರಿದ್ದಾರೆ.













Click it and Unblock the Notifications