ಇರಾನ್ ವಾಕ್‌ಔಟ್‌, ಶೆಹಬಾಜ್ ಶಾಕ್‌, ಜೆಡಿ ವ್ಯಾನ್ಸ್ ಅವಾಕ್ಕು: ಸಂಧಾನ ಸಭೆಯಲ್ಲಿ ಹೈಡ್ರಾಮಾ!

ಇರಾನ್‌- ಅಮೆರಿಕ ನಡುವೆ ಕೊನೆಗೂ ಶಾಂತಿ ನೆಲೆಸಿತು ಎಂದುಕೊಳ್ಳುತ್ತಿರುವಾಗಲೇ, ಹಠಾತ್ತಾಗಿ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಟ್ರಂಪ್‌ ಹೇಳಿಕೆಯಿಂದ ಮುನಿಸಿಕೊಂಡ ಟೆಹರಾನ್‌ ನಿಯೋಗ, ಸಂಧಾನ ಸಭೆಯಿಂದ ಹೊರನಡೆದಿದೆ. ಶಾಂತಿ ಮಾತುಕತೆ ಸದ್ಯಕ್ಕೆ ಮುಂದುವರಿದಿಲ್ಲ. ಟ್ರಂಪ್‌ ಅವರ ನಾಲಿಗೆಯೇ ಅಮೆರಿಕದ ದೊಡ್ಡ ಶತ್ರು ಎಂಬುದು ಇದರಿಂದ ಸಾಬೀತಾಗದಂತಾಗಿದೆ. ಇರಲಾರದೇ ಇರುವೆ ಬಿಟ್ಟುಕೊಂಡರು ಎಂಬಂತೆ, ಟ್ರಂಪ್‌ ಸುಮ್ಮನಿದ್ದರೆ ಇರಾನ್‌ ಕೂಡ ಶಾಂತಿ ಮಾತುಕತೆ ಮುಂದುವರಿಸುತ್ತಿತ್ತು. ಆದರೆ ಟ್ರಂಪ್‌ ನಾಲಿಗೆ ತುರಿಕೆ ಎಲ್ಲವನ್ನೂ ಕೆಡಿಸಿದೆ.

ಇರಾನ್‌ ಮತ್ತು ಅಮೆರಿಕ ನಡುವಿನ ಮಹತ್ವದ ಮಾತುಕತೆ ಆರಂಭವಾಗಬೇಕಿದ್ದ ವೇದಿಕೆಯಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಿತು. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಇರಾನ್ ನಿಯೋಗ ಹಠಾತ್ತನೆ ಸಭಾಂಗಣದಿಂದ ಹೊರನಡೆದಿದ್ದು, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್‌, ಸೇನಾ ಮುಖ್ಯಸ್ಥ ಅಸೀಂ ಮುನೀರ್ ಹಾಗೂ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಅವಾಕ್ಕಾದ ಪ್ರತಿಕ್ರಿಯೆಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

Iran Walkout

ಇರಾನ್‌, ಅಮೆರಿಕ, ಪಾಕಿಸ್ತಾನ ಹಾಗೂ ಕತಾರ್ ಪ್ರತಿನಿಧಿಗಳು ಇತ್ತೀಚೆಗೆ ಸಹಿ ಮಾಡಿದ ಇಸ್ಲಾಮಾಬಾದ್ ಒಪ್ಪಂದದ (MoU) ಅಡಿಯಲ್ಲಿ ಮೊದಲ ಸುತ್ತಿನ ಮಾತುಕತೆಗಾಗಿ ಒಂದೇ ವೇದಿಕೆಯಲ್ಲಿ ಸೇರಿದ್ದರು. ಈ ಮಾತುಕತೆಗಳ ಉದ್ದೇಶ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವುದು, ನಿರ್ಬಂಧಗಳ ವಿಷಯ ಚರ್ಚಿಸುವುದು ಹಾಗೂ ಹಲವು ರಾಜತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿತ್ತು.

ಆದರೆ ಸಭೆ ಆರಂಭಕ್ಕೂ ಮುನ್ನವೇ ವಾತಾವರಣ ಉದ್ವಿಗ್ನಗೊಂಡಿತು. ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಪರಸ್ಪರ ಕೈಕುಲುಕಿ ಫೋಟೋಗೆ ಪೋಸ್ ನೀಡುವ ಕಾರ್ಯಕ್ರಮವನ್ನು ಆಯೋಜಕರು ಸಿದ್ಧಪಡಿಸಿದ್ದರು. ಆದರೆ ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಘರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರು. ಅಮೆರಿಕದೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಕೇವಲ "ಮಾಧ್ಯಮ ಪ್ರದರ್ಶನ" ಎಂದು ಇರಾನ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಇರಾನ್ ಯುದ್ಧ ಪರಿಣಾಮ: ಮಂಗಳೂರಲ್ಲಿ ₹15,000 ಕೋಟಿ ತೈಲ ಸಂಗ್ರಹ ನಿರ್ಮಿಸಲು ONGCಗೆ ಕೇಂದ್ರ ಸೂಚನೆ
ಇರಾನ್ ಯುದ್ಧ ಪರಿಣಾಮ: ಮಂಗಳೂರಲ್ಲಿ ₹15,000 ಕೋಟಿ ತೈಲ ಸಂಗ್ರಹ ನಿರ್ಮಿಸಲು ONGCಗೆ ಕೇಂದ್ರ ಸೂಚನೆ

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಕುತೂಹಲಕಾರಿ ದೃಶ್ಯ ಕಾಣಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಸಭಾಂಗಣದಿಂದ ಹೊರಡುವ ಮುನ್ನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಕಿವಿಯಲ್ಲಿ ಏನೋ ಸಂದೇಶ ಹೇಳುತ್ತಿರುವುದು ಕಂಡುಬಂದಿದೆ. ಸಂದೇಶ ಕೇಳಿದ ತಕ್ಷಣ ಶರೀಫ್ ಮುಖದಲ್ಲಿ ಅಚ್ಚರಿ ಮೂಡಿದ್ದು, ಅವರು ಪಕ್ಕದಲ್ಲಿದ್ದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಕಡೆಗೆ ಆಶ್ಚರ್ಯದಿಂದ ಕೈ ಸನ್ನೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಘಟನೆ ನಡೆಯುತ್ತಿದ್ದಂತೆ ಕೆಲವೇ ಅಡಿ ದೂರದಲ್ಲಿ ನಿಂತಿದ್ದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಪರಿಸ್ಥಿತಿಯನ್ನು ಗಮನಿಸಿದಂತೆ ಕಾಣಿಸಿದರು. ನಂತರ ಅವರು ಶರೀಫ್ ಮತ್ತು ಮುನೀರ್ ಅವರ ಬಳಿ ಹೋಗಿ ಕೆಲ ಕ್ಷಣ ಚರ್ಚೆ ನಡೆಸಿದರು. ಅರಘ್ಚಿ ಏನು ಸಂದೇಶ ನೀಡಿದರು ಎಂಬುದು ಬಹಿರಂಗವಾಗಿಲ್ಲದಿದ್ದರೂ, ಆ ಕ್ಷಣವೇ ಸಭೆಯ ಅತ್ಯಂತ ಚರ್ಚಿತ ಘಟನೆಯಾಗಿ ಪರಿಣಮಿಸಿತು.

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ: ಜಾಗತಿಕ ಮಾರುಕಟ್ಟೆಯಲ್ಲಿ ದಿಢೀರ್ ಏರಿದ ತೈಲ ಬೆಲೆ, ವಿಮಾನ ಸಂಚಾರ ಸ್ತಬ್ಧ
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ: ಜಾಗತಿಕ ಮಾರುಕಟ್ಟೆಯಲ್ಲಿ ದಿಢೀರ್ ಏರಿದ ತೈಲ ಬೆಲೆ, ವಿಮಾನ ಸಂಚಾರ ಸ್ತಬ್ಧ

ಇದರ ನಡುವೆಯೂ ಕೆಲ ಸಮಯದವರೆಗೆ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಒಂದೇ ಕೊಠಡಿಯಲ್ಲಿ ಇದ್ದರು. ಅರಘ್ಚಿ ಅವರು ಸಭಾಂಗಣಕ್ಕೆ ಪ್ರವೇಶಿಸಿ ಶೆಹಬಾಜ್ ಶರೀಫ್ ಅವರನ್ನು ಆತ್ಮೀಯವಾಗಿ ಭೇಟಿಯಾದರು. ಆದರೆ ಅಮೆರಿಕ ನಿಯೋಗದೊಂದಿಗೆ ಯಾವುದೇ ನೇರ ಸಂಭಾಷಣೆ ನಡೆಸದೆ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಟುಹೋದರು.

ಮಾತುಕತೆಯ ವಾತಾವರಣ ಇಷ್ಟು ಉದ್ವಿಗ್ನಗೊಳ್ಳಲು ಕಾರಣವಾದದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಎಂದು ಹೇಳಲಾಗಿದೆ. ಲೆಬನಾನ್‌ನ ಹೆಜ್ಬುಲ್ಲಾ ಸಂಘಟನೆಯನ್ನು ನಿಯಂತ್ರಿಸದಿದ್ದರೆ ಇರಾನ್ ವಿರುದ್ಧ ಮತ್ತೆ ಕಠಿಣ ಸೇನಾ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯನ್ನು ಇರಾನ್ ತೀವ್ರವಾಗಿ ವಿರೋಧಿಸಿದ್ದು, ಅದೇ ಕಾರಣಕ್ಕೆ ನಿಯೋಗ ಸಭಾ ಸ್ಥಳದಿಂದ ಹೊರನಡೆದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ಪ್ರತಿನಿಧಿಗಳು ಅಮೆರಿಕದ ಬೆದರಿಕೆ ಭಾಷೆಯನ್ನು ಖಂಡಿಸಿ ಅಧಿಕೃತ ಆಕ್ಷೇಪವನ್ನೂ ದಾಖಲಿಸಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇರಾನ್ ಮೂಲಗಳು ತಿಳಿಸಿವೆ.

ಆದರೂ ಮಾತುಕತೆ ಸಂಪೂರ್ಣವಾಗಿ ವಿಫಲವಾಗಿಲ್ಲ ಎಂಬ ಸೂಚನೆಗಳೂ ಸಿಕ್ಕಿವೆ. ಸುಮಾರು 80 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಚರ್ಚೆಯಲ್ಲಿ ಯುದ್ಧ ಅಂತ್ಯಗೊಳಿಸುವುದು, ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದು ಹಾಗೂ ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ಹಣಕಾಸು ನಿಧಿಗಳನ್ನು ಬಿಡುಗಡೆ ಮಾಡುವ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶಿಯಾನ್ ಸಹಿ ಮಾಡಿದ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ಜಾರಿಗೊಳಿಸುವುದು ಈ ಮಾತುಕತೆಯ ಉದ್ದೇಶವಾಗಿದೆ. ಈ ಮಾತುಕತೆ 60 ದಿನಗಳ ಅವಧಿ ಹೊಂದಿದೆ. ಇರಾನ್ ಅಣ್ವಸ್ತ್ರ ತಯಾರಿ, ಹೋರ್ಮುಜ್‌ ಜಲಸಂಧಿ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಮಾತುಕತೆಯ ಪ್ರಧಾನ ಅಂಶಗಳಾಗಿವೆ. ಹೋರ್ಮುಜ್ ತೆರೆಯುವುದು, ಇರಾನ್
ಅಣ್ವಸ್ತ್ರಸಿದ್ದತೆ ನಿಲ್ಲಿಸುವುದು, ಲೆಬನಾನ್ ಕದನ ವಿರಾಮ ಸೇರಿದಂತೆ ಕೆಲವು ವಿಷಯಗಳಲ್ಲಿ ಈಗಾಗಲೇ ಒಪ್ಪಂದವಾಗಿದೆ ಎಂದು ವ್ಯಾನ್ಸ್‌ ಹೇಳಿದ್ದಾರೆ. ಆದರೆ ಇರಾನ್ ಇತ್ತೀಚೆಗೆ ಜಲಸಂಧಿಯನ್ನು ಮತ್ತೆ ಮುಚ್ಚಿದ್ದೇವೆ ಎಂದಿದೆ.

ಇರಾನ್ ಮೂಲಗಳ ಪ್ರಕಾರ, ಕತಾರ್ ಮಧ್ಯಸ್ಥಿಕೆಯಲ್ಲಿ ಸ್ಥಗಿತಗೊಂಡಿರುವ ಇರಾನ್ ನಿಧಿಗಳ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭಗೊಂಡಿವೆ. ಜೊತೆಗೆ ಇರಾನ್ ತೈಲ ರಫ್ತು ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸುವ ಕರಡು ಪ್ರಸ್ತಾವನೆಗೂ ಅಂತಿಮ ರೂಪ ನೀಡಲಾಗಿದೆ ಎನ್ನಲಾಗಿದೆ.

ಒಟ್ಟಾರೆ, ಮೊದಲ ಸುತ್ತಿನ ಮಾತುಕತೆಗಳು ಉದ್ವಿಗ್ನ ವಾತಾವರಣದಲ್ಲಿ ನಡೆದಿದ್ದರೂ, ಕೆಲವು ಪ್ರಮುಖ ವಿಷಯಗಳಲ್ಲಿ ಪ್ರಗತಿಯ ಸುಳಿವುಗಳು ಕಾಣಿಸಿಕೊಂಡಿವೆ. ಆದರೆ ಟ್ರಂಪ್ ಅವರ ಹೇಳಿಕೆ ಮತ್ತು ಇರಾನ್ ನಿಯೋಗದ ವಾಕ್‌ಔಟ್ ನಂತರ ಮುಂದಿನ ಸುತ್ತಿನ ಮಾತುಕತೆಗಳು ಯಾವ ದಿಕ್ಕಿನಲ್ಲಿ ಸಾಗಲಿವೆ ಎಂಬುದು ಈಗ ಜಾಗತಿಕ ರಾಜಕೀಯ ವಲಯದ ಕುತೂಹಲದ ಕೇಂದ್ರಬಿಂದುವಾಗಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+