ಐಸ್‌ಕ್ರೀಮ್ ತಿಂದದ್ದಕ್ಕೆ ಕೆಲಸದಿಂದ ತೆಗೆದು ಹಾಕಲು ಮುಂದಾದ ಮ್ಯಾನೇಜರ್! ಪರಿಸ್ಥಿತಿಯನ್ನೇ ಬದಲಾಯಿಸಿದ್ದು ಹೆಚ್‌ಆರ್ ಮುಂದಿಟ್ಟ
ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಲಯದಲ್ಲಿ 'ಮೈಕ್ರೋಮ್ಯಾನೇಜ್‌ಮೆಂಟ್' ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ನೌಕರರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ, ಎಷ್ಟರ ಮಟ್ಟಿಗೆ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ ಎನ್ನುವುದನ್ನು ಪರಿಶೀಲಿಸುವುದು ಸಹಜ. ಹಾಗಂತ ಸದಾ ನೌಕರರ ಕುತ್ತಿಗೆ ಮೇಲೆ ಕೂರುವುದು, ಎಲ್ಲಿ ಹೋದರು, ಬಂದರು ಎನ್ನುವುದರ ಮೇಲೆ ಅತಿಯಾಗಿ ಕಣ್ಣಿಡುವುದು ಒಳ್ಳೆಯ ಪದ್ದತಿಯಲ್ಲ. ಇದು ಅವರ ಆತ್ಮ ವಿಶ್ವಾಸವನ್ನೇ ಕುಗ್ಗಿಸಿ ಬಿಡಬಹುದು. ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಜ್ವಲಂತ ಸಮಸ್ಯೆಯ ಕುರಿತು ಕರಿಯರ್ ಕೋಚ್ ಸೈಮನ್ ಇಂಗಾರಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಅವರು ನೈಜ ಘಟನೆಯೊಂದನ್ನು ಶೇರ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಜಾಗತಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಹಿಳಾ ಉದ್ಯೋಗಿ ಐಸ್‌ಕ್ರೀಮ್ ಬ್ರೇಕ್ ತಿಂದರು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲು ಮ್ಯಾನೇಜರ್ ಮುಂದಾಗಿರುವ ವಿಲಕ್ಷಣ ಘಟನೆ ಬಗ್ಗೆ ಅವರು ಹೇಳಿ ಕೊಂಡಿದ್ದಾರೆ.

ಟಾರ್ಗೆಟ್ ಮುಗಿಸಿದ್ದರೂ ತಪ್ಪದ ಸಂಕಷ್ಟ:
ವರದಿಯ ಪ್ರಕಾರ, ಕಂಪನಿಯೊಂದರ ಮ್ಯಾನೇಜರ್ ಫ್ಲಾರೆನ್ಸ್ ಎಂಬ ಉದ್ಯೋಗಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು ಎಂದು ಪಟ್ಟುಹಿಡಿದು ಹೆಚ್ ಆರ್‌ಗೆ ಮೇಲ್ ಮಾಡಿದ್ದರು. ಮ್ಯಾನೇಜರ್ ಮೇಲ್ ನೋಡಿ ಶಾಕ್ ಆದ ಹೆಚ್‌ಆರ್ ಈ ತುರ್ತು ನಿರ್ಧಾರದ ಹಿಂದಿನ ಕಾರಣ ವಿವರಿಸುವಂತೆ ಕೇಳಿದ್ದಾರೆ. ಆಗ ಅಸಲಿ ವಿಷಯ ಹೊರಬಿದ್ದಿದೆ. ಇಲ್ಲಿ ಫ್ಲಾರೆನ್ಸ್ ಮಾಡಿದ 'ಕಾರ್ಪೊರೇಟ್ ಅಪರಾಧ' ಏನೆಂದರೆ, ಆಕೆ ತನ್ನ ಕಂಪ್ಯೂಟರ್ ಮುಂದೆ ಕೂರುವ ಬದಲು ಬ್ರೇಕ್ ರೂಮ್‌ನಲ್ಲಿ ಐಸ್‌ಕ್ರೀಮ್ ತಿಂದದ್ದು.
ಇನ್ನು ಫ್ಲಾರೆನ್ಸ್ ಅವರ ಕೆಲಸದ ಔಟ್‌ಪುಟ್ ಹೇಗಿದೆ ಎಂದು ಹೆಚ್ ಆರ್ ಪ್ರಶ್ನಿಸಿದಾಗ, ಆಕೆ ಎಲ್ಲಾ ಕೆಲಸಗಳನ್ನೂ ಸಮಯಕ್ಕೆ ಸರಿಯಾಗಿ ಮುಗಿಸುತ್ತಾಳೆ, ಡೆಡ್‌ಲೈನ್‌ಗಳನ್ನು ಸರಿಯಾಗಿ ಪಾಲಿಸುತ್ತಾಳೆ, ಆಕೆಯ ಕಾರ್ಯಕ್ಷಮತೆಯಲ್ಲಿ ಯಾವುದೇ ಲೋಪವಿಲ್ಲ ಎನ್ನುವ ಉತ್ತರ ಮ್ಯಾನೇಜರ್ ಬಾಯಿಯಿಂದಲೇ ಬಂದಿದೆ. ಆದರೆ, ತನ್ನ ಕೆಳಗೆ ಕೆಲಸ ಮಾಡುವವರು ಸದಾ ತನ್ನ ಕಣ್ಣೆದುರೇ ಸೀಟಿನಲ್ಲಿ ಕೂತಿರಬೇಕು ಎನ್ನುವ ಮ್ಯಾನೇಜರ್‌ನ ಹಠ ಈ ವಿವಾದಕ್ಕೆ ಕಾರಣವಾಗಿತ್ತು.
ಮ್ಯಾನೇಜರ್ ಬೆವರಿಳಿಸಿದ ಹೆಚ್‌ಆರ್:
ಇಲ್ಲಿ ಮ್ಯಾನೇಜರ್ ಮನಸ್ಥಿತಿ ಏನು ಎನ್ನುವುದು ಹೆಚ್‌ಆರ್‌ಗೆ ಅರ್ಥವಾಗಿದೆ. ಅವರು ಮ್ಯಾನೇಜರ್ ಯೋಚನೆಯ ರೀತಿಯಲ್ಲಿಯೇ ತಿರುಗೇಟು ನೀಡಿದ್ದಾರೆ. "ನಮ್ಮ ಕಂಪನಿಯಲ್ಲಿ ಉದ್ಯೋಗಿಗಳಿಗೆ ಸ್ಮೋಕಿಂಗ್ ಬ್ರೇಕ್‌ಗೆ ಅವಕಾಶವಿದೆಯೇ?" ಎಂದು ಹೆಚ್‌ಆರ್ ಮ್ಯಾನೇಜರ್ ಅನ್ನು ಪ್ರಶ್ನಿಸಿದ್ದಾರೆ. ಮ್ಯಾನೇಜರ್, "ಹೌದು, ಸಾಮಾನ್ಯವಾಗಿ 10 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯವನ್ನು ಸ್ಮೋಕಿಂಗ್‌ಗೆ ಬಳಸಲು ಅವಕಾಶವಿದೆ" ಎಂದು ಉತ್ತರಿಸಿದ್ದಾರೆ.
ತಕ್ಷಣವೇ ಹೆಚ್‌ಆರ್ "ಆರೋಗ್ಯಕ್ಕೆ ಹಾನಿಕರವಾದ ಸಿಗರೇಟ್ ಬ್ರೇಕ್‌ಗೆ ಕಂಪನಿಯಲ್ಲಿ ಅವಕಾಶವಿರುವಾಗ ಕೇವಲ 10 ನಿಮಿಷದ ಐಸ್‌ಕ್ರೀಮ್ ಬ್ರೇಕ್ ತೆಗೆದುಕೊಂಡಿದ್ದಕ್ಕೆ ಕೆಲಸದಿಂದಲೇ ವಜಾ ಮಾಡಲು ಮುಂದಾಗುತ್ತಿರುವುದು ಎಷ್ಟು ಸರಿ ಎಂದು ನೇರ ಪ್ರಶ್ನೆ ಹಾಕಿದ್ದಾರೆ.
ಇದಕ್ಕೆ ಉತ್ತರಿಸಲಾಗದೆ ಮ್ಯಾನೇಜರ್ ಮೌನವಾಗಿದ್ದಾರೆ. "ಇಲ್ಲಿ ಸಮಸ್ಯೆ ಇರುವುದು ಐಸ್‌ಕ್ರೀಮ್‌ನಲ್ಲಿ ಅಲ್ಲ, ಬದಲಿಗೆ ಉದ್ಯೋಗಿಯ ಕೆಲಸವನ್ನು ಮೌಲ್ಯೀಕರಿಸುವ ಬದಲು, ಆಕೆ ಎಷ್ಟು ಸೆಕೆಂಡ್ ಸೀಟಿನಿಂದ ಎದ್ದಿದ್ದಾಳೆ ಎಂದು ಕಾವಲು ಕಾಯುತ್ತಿರುವ 'ಐಸ್‌ಕ್ರೀಮ್ ವಾಚರ್'ನಲ್ಲಿ ಎಂದು ಹೆಚ್ ಆರ್ ಹೇಳಿದ್ದಾರೆ.
ಕಂಪನಿ ನೀತಿಯಲ್ಲಿ ಮಹತ್ವದ ಬದಲಾವಣೆ:
ಈ ತೀಕ್ಷ್ಣ ಸಂವಾದವು ಮ್ಯಾನೇಜರ್‌ಗೆ ತನ್ನ ತಪ್ಪಿನ ಅರಿವಾಗುವತೆ ಮಾಡಿದೆ. ವೈರಲ್ ಪೋಸ್ಟ್ ಪ್ರಕಾರ, ಮ್ಯಾನೇಜರ್ ತನ್ನ ತಪ್ಪನ್ನು ಒಪ್ಪಿಕೊಂಡು ಕೆಲಸದಿಂದ ವಜಾ ಮಾಡುವ ನಿರ್ಧಾರವನ್ನು ಮರುಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ವಾರವೇ ಕಂಪನಿಯ ಅಧಿಕೃತ ಬ್ರೇಕ್ ನೀತಿಯನ್ನು ಕಾಯಂ ಆಗಿ ಬದಲಾಯಿಸಲಾಯಿತು.
ಹೊಸ ನಿಯಮದ ಪ್ರಕಾರ ಧೂಮಪಾನ ಮತ್ತು ಐಸ್‌ಕ್ರೀಮ್ ಬ್ರೇಕ್ ಎರಡನ್ನೂ 10 ನಿಮಿಷಗಳ ಪ್ರಮಾಣಿತ ಬ್ರೇಕ್ ನಿಯಮದ ಅಡಿಯಲ್ಲಿ ತರಲಾಯಿತು. ಸಣ್ಣಪುಟ್ಟ ವಿಷಯಗಳ ಮೇಲೆ ಪೊಲೀಸ್ ಗಿರಿ ಮಾಡುವ ಬದಲು, ಉದ್ಯೋಗಿಗಳ ಪ್ರಾಡಕ್ಟಿವಿಟಿ ಮೇಲೆ ಗಮನ ಹರಿಸುವುದರಿಂದ ಮಾತ್ರ ಆರೋಗ್ಯಕರ ಕಚೇರಿ ವಾತಾವರಣ ನಿರ್ಮಿಸಲು ಸಾಧ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಅತಿಯಾದ ಹತೋಟಿ ಮತ್ತು ಸ್ವಾತಂತ್ರ್ಯದ ಕೊರತೆಯು ನೌಕರರ ಸೃಜನಶೀಲತೆಯನ್ನು ಕಸಿದುಕೊಳ್ಳುತ್ತದೆ. ಅವರಲ್ಲಿ ಆತಂಕವನ್ನು ಹೆಚ್ಚಿಸುತ್ತದೆ ಮತ್ತು ನಿಷ್ಠಾವಂತ ಉದ್ಯೋಗಿಗಳೂ ಸಹ ಕೆಲಸದ ಮೇಲಿನ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications