ಕೆಮ್ಮಣ್ಣುಗುಂಡಿಯಲ್ಲಿ ಹುಲಿ ಪ್ರತ್ಯಕ್ಷ; ಕಣ್ತುಂಬಿಕೊಂಡ ಪ್ರವಾಸಿಗರು, ವಿಡಿಯೋ ವೈರಲ್
ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರಿಗೆ ಅಪರೂಪದ ಹಾಗೂ ರೋಮಾಂಚನಕಾರಿ ಅನುಭವ ಲಭಿಸಿದೆ. ಇಲ್ಲಿನ ಜಂಗಲ್ ರೆಸಾರ್ಟ್‌ನಿಂದ ಹೆಬ್ಬೆ ಫಾಲ್ಸ್ ಕಡೆಗೆ ತೆರಳುತ್ತಿದ್ದ ಸಫಾರಿ ವಾಹನದ ಮುಂದೆ ಅರಣ್ಯ ರಸ್ತೆಯಲ್ಲೇ ಹುಲಿ ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ಅಚ್ಚರಿಗೊಳಿಸಿದೆ.
ರಸ್ತೆಯ ಮಧ್ಯೆ ನಿಧಾನವಾಗಿ ನಡೆದು ಹೋಗುತ್ತಿದ್ದ ಹುಲಿಯ ಗಾಂಭೀರ್ಯತೆ ನಡೆಯು ಪ್ರವಾಸಿಗರನ್ನು ಕೆಲ ಕ್ಷಣ ಮಂತ್ರಮುಗ್ಧರನ್ನಾಗಿಸಿದೆ. ಅರಣ್ಯದೊಳಗೆ ಹುಲಿಯನ್ನು ನೇರವಾಗಿ ನೋಡುವ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪ್ರವಾಸಿಗರು ಆ ದೃಶ್ಯವನ್ನು ಕಣ್ಣುಂಬಿಕೊಂಡಿದ್ದಾರೆ. ಈ ದೃಶ್ಯಗಳು ವೈರಲ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭದ್ರಾ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಈ ಹುಲಿಯ ದೃಶ್ಯಗಳನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಆ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಕೆಮ್ಮಣ್ಣುಗುಂಡಿಯಲ್ಲಿ ಹುಲಿ ದರ್ಶನ ಎಂದು ಹಂಚಿಕೊಳ್ಳಲಾಗಿರುವ ದೃಶ್ಯಗಳು ಸಾವಿರಾರು ವೀಕ್ಷಣೆ ಮತ್ತು ಹಂಚಿಕೆ ಪಡೆಯುತ್ತಿವೆ. ಅರಣ್ಯ ಪ್ರಿಯರು ಹಾಗೂ ಪ್ರವಾಸಿಗರು ಈ ದೃಶ್ಯಗಳನ್ನು ಕೌತುಕದಿಂದ ವೀಕ್ಷಿಸಿದ್ದು, ಕೆಮ್ಮಣ್ಣುಗುಂಡಿಯ ಅರಣ್ಯ ಪರಿಸರ ಇನ್ನಷ್ಟು ಶ್ರೀಮಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎನ್ನುತ್ತಿದ್ದಾರೆ.
ಹಿಂದೆಯೂ ಕಾಣಿಸಿಕೊಂಡಿದ್ದ ಹುಲಿಗಳು
ಕೆಲ ದಿನಗಳ ಹಿಂದಷ್ಟೇ ಇಲ್ಲಿನ ತಣಿಗೆಬೈಲು ಹಾಗೂ ಚಂದ್ರದ್ರೋಣ ಪರ್ವತ ಸಾಲುಗಳಲ್ಲಿಯೂ ಹುಲಿಗಳ ಸಂಚಾರ ಕಂಡುಬಂದಿತ್ತು. ಇದೀಗ ಮತ್ತೆ ಕೆಮ್ಮಣ್ಣುಗುಂಡಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವುದು ಈ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹಾಗೂ ಚಲನವಲನ ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತಿದೆ.
ಪ್ರವಾಸಿಗರಿಗೆ ಎಚ್ಚರಿಕೆ
ಹುಲಿಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಹೆಬ್ಬೆ ಫಾಲ್ಸ್ ಹಾಗೂ ಸುತ್ತಮುತ್ತಲಿನ ಅರಣ್ಯ ಮಾರ್ಗಗಳಲ್ಲಿ ಸಂಚರಿಸುವ ಪ್ರವಾಸಿಗರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ. ಅನುಮತಿ ಇಲ್ಲದೆ ಅರಣ್ಯ ಒಳಭಾಗಕ್ಕೆ ಪ್ರವೇಶಿಸಬಾರದು. ವಾಹನದಿಂದ ಇಳಿದು ಫೋಟೋ ಅಥವಾ ವೀಡಿಯೋ ತೆಗೆಯಬಾರದು. ಶಬ್ದ ಮಾಡುವುದು, ಪ್ರಾಣಿಗಳನ್ನು ಕೆರಳಿಸುವ ವರ್ತನೆ ತಪ್ಪಿಸಬೇಕು ಎಂದು ಸಲಹೆ ನೀಡಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯೇ ನಮ್ಮ ಮೊದಲ ಆದ್ಯತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೆಮ್ಮಣ್ಣುಗುಂಡಿಯ ಈ ಹುಲಿ ದರ್ಶನ ಒಂದು ರೋಮಾಂಚಕಾರಿ ಘಟನೆ ಮಾತ್ರವಲ್ಲದೆ, ಅರಣ್ಯ ಜೀವ ವೈವಿಧ್ಯ ಉಳಿದಿದೆ ಎಂಬ ಭರವಸೆಯ ಸಂಕೇತವೂ ಆಗಿದೆ. ಪ್ರಕೃತಿಯ ಮಡಿಲಲ್ಲಿ ಪ್ರವಾಸ ಅನುಭವಿಸುವಾಗ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಅಗತ್ಯ ಎಂಬ ಸಂದೇಶವನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.












Click it and Unblock the Notifications