ವಿಧಾನಸಭೆಯಿಂದ ವೀರ್ ಸಾವರ್ಕರ್ ಭಾವಚಿತ್ರ ತೆರವುಗೊಳಿಸುವ ಕುರಿತು ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 11: ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಿಂದ ಸಾವರ್ಕರ್ ಭಾವಚಿತ್ರ ತೆರವುಗೊಳಿಸುವ ಹೇಳಿಕೆಗೆ ಬದ್ಧ ಎಂದು ಹೇಳಿದ್ದಾರೆ ಇದಕ್ಕೆ ಸರ್ಕಾರದ ನಿಲುವು ಏನು ಎಂದು ಪ್ರಶ್ನೆಗೆ ಅದು ಸದನದ ಮತ್ತು ಸಭಾಧ್ಯಕ್ಷರ ಸ್ವತ್ತು. ಈ ವಿಚಾರವಾಗಿ ಆನಂತರ ಮಾತನಾಡುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದಿನ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ವಿರೋಧ ಪಕ್ಷದ ಶಾಸಕರಾಗಲಿ, ಆಡಳಿತ ಪಕ್ಷದ ಶಾಸಕರಾಗಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಸ್ಪಂದಿಸಲು ಸರ್ಕಾರ ಸಿದ್ಧವಾಗಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಕರ್ನಾಟಕ ಸೇರಿದಂತೆ ನಮ್ಮದು ಸಮಗ್ರ ಕರ್ನಾಟಕ. ವಿಧಾನಸಭೆಯಲ್ಲಿ ಚರ್ಚೆ ನಡೆಸಲು ನಾವು ಸದಾ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ವಿಭಜನೆಗೆ ಕೂಗು ಕೇಳಿ ಬರುತ್ತಿದ್ದು, ಇಂದು ಕರೆ ನೀಡಲಾಗಿರುವ ಬಂದ್ ಬಗ್ಗೆ ಕೇಳಿದಾಗ "ಸದನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾವನೆ ಬಂದಾಗ ಖಂಡಿತ ಚಿಂತನೆ ಮಾಡುತ್ತೇವೆ" ಎಂದ ಅವರು, ಬಿಜೆಪಿ ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆಗುತ್ತಿದೆಯೇ ಎಂದು ಕೇಳಿದಾಗ ಅವರ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.












Click it and Unblock the Notifications