ಕೋವಿಡ್: ಬಳ್ಳಾರಿ, ಬೆಂಗಳೂರಿಗರಿಗೆ ಆರೋಗ್ಯ ಇಲಾಖೆಯ ಮಹತ್ವದ ಎಚ್ಚರಿಕೆ!
ಬೆಂಗಳೂರು, ನ. 04: ಕೊರೊನಾ ವೈರಸ್ ಪರಿಣಾಮ ಹಬ್ಬ-ಹರಿದಿನಗಳ ಮೇಲಾಗಿದೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿಯೇ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಯ್ತು. ಇದೀಗ ದೀಪಾವಳಿಯನ್ನೂ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಅವಕಾಶ ಕೊಡಬೇಕಾ? ಅಥವಾ ಪಟಾಕಿಯನ್ನು ನಿಷೇಧ ಮಾಡಬೇಕಾ ಎಂಬುದನ್ನು ತಜ್ಞರ ವರದಿ ಆಧರಿಸಿ ಸರ್ಕಾರ ನಿರ್ಧಾರ ಮಾಡಲಿದೆ.
ದೀಪಾವಳಿ ಆಚರಣೆ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ವಿಧಾನಸೌಧದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಜೊತೆಗೆ ಉಪ ಚುನಾವಣೆ ನಡೆದಿರುವ ಶಿರಾ ಹಾಗೂ ಆರ್ ಆರ್ ಕ್ಷೇತ್ರಗಳಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ತೀವ್ರವಾಗಿ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಕೊರೊನಾ ವೈರಸ್ ಕುರಿತು ಸಮೀಕ್ಷೆ ಮಾಡಲು ರಾಜ್ಯ ಆರೋಗ್ಯ ಇಲಾಖೆ ಉದ್ದೇಶಿಸಿದೆ.

ಪಟಾಕಿಯಿಂದ ಸೋಂಕು ಹಚ್ಚಳ?
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಶಂಕಿಸಿದ್ದಾರೆ. ಹಾಗಾಗಿಯೇ ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಪಟಾಕಿ ನಿಷೇಧ ಮಾಡಬೇಕೇ? ಬೇಡವೇ? ಎಂಬ ಬಗ್ಗೆ ಇವತ್ತು ಅಥವಾ ನಾಳೆ ತಜ್ಞರ ಸಮಿತಿ ವರದಿ ನೀಡುತ್ತದೆ. ತಜ್ಞರು ಕೊಡುವ ವರದಿ ಆಧಾರದ ಮೇಲೆ ಪಟಾಕಿ ನಿಷೇಧದ ಕುರಿತು ಸರ್ಕಾರ ತೀರ್ಮಾನ ಮಾಡಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್ ಪತ್ತೆಗೆ ರಾಂಡಮ್ ಟೆಸ್ಟ್
ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಯ್ತು. ಅದೇ ಮಾದರಿಯಲ್ಲಿ ಸಂಪ್ರದಾಯಗಳಿಗೆ ತೊಂದರೆಯಾಗದಂತೆ ಸರಳ ರೀತಿಯಲ್ಲಿ ಹಬ್ಬಗಳ ಆಚರಣೆಗೆ ಅವಕಾಶ ಕೊಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ದಸರಾ ಹಾಗೂ ಉಪ ಚುನಾವಣೆ ನಡೆದಿರುವ ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ವೈರಸ್ ಪತ್ತೆಗೆ ರಾಂಡಮ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಉದ್ದೇಶಿಸಿದೆ ಎಂದು ಡಾ. ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.

28 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪತ್ತೆಗೆ ಸಮೀಕ್ಷೆ
ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿದ್ದಾರೆ. ರಾಜ್ಯದ 28 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪತ್ತೆಗೆ ಸಿರೋ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತಿ ಸರ್ವೆ ಮಾಡಲಾಗಿತ್ತು. ಆದರೆ ಅಲ್ಲಿ ಕೇವಲ ಮಹಾನಗರಗಳಲ್ಲಿ ಸರ್ವೆ ಮಾಡಲಾಗಿತ್ತು. ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗಿದೆ. ಮಾಡರೇಟ್ ರಿಸ್ಕ್ ಮತ್ತು ಹೈ ರಿಸ್ಕ್ ಇರುವ ಎರಡೂ ವಿಭಾಗಗಳ ಸೋಂಕಿತರ ಸರ್ವೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ 15,654 ಜನರನ್ನು ಸಮೀಕ್ಷೆ ಮಾಡಲಾಗಿದೆ. ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿರುವವರ ಸರಾಸರಿ ಶೇಕಡಾ 16.4 ರಷ್ಟಿದೆ. ಮುಂಬೈ, ಪುಣೆ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇಕಡಾ 12.7 ರಷ್ಟಿದೆ. ಎರಡೂ ಸೇರಿ ಶೇಕಡಾ. 27.3 ಇದೆ. ಮರಣ ಪ್ರಮಾಣ ಶೇಕಡಾ 0.05 ಮಾತ್ರ ಇದೆ ಮುಂಬೈ ಶೇಕಡಾ 0.10 ರಷ್ಟಿದ್ದು, ದೆಹಲಿಯಲ್ಲಿ ಅದು ಶೇಕಡಾ 0.09ರಷ್ಟಿದೆ.

ಬಳ್ಳಾರಿ, ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚು!
ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅದರಲ್ಲೂ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ.45 ರಷ್ಟು ಹಾಗೂ ದಕ್ಷಿಣ ವಿಭಾಗದಲ್ಲಿ ಶೇಕಡಾ 39ರಷ್ಟು ಸೋಂಕಿನ ಪ್ರಮಾಣ ಇದೆ. ಡಿಸೆಂಬರ್ ಅಂತ್ಯದಲ್ಲಿ ಹಾಗೂ ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಇನ್ನೂ ಎರಡು ಹಂತದ ಸಮೀಕ್ಷೆ ಮಾಡಿಸಲಾಗುತ್ತದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಸಮೀಕ್ಷೆ ಆಧಾರ ಮೇಲೆ ಸೋಂಕು ತಡೆಯಲು ಸರ್ಕಾರಬ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದ್ದಾರೆ.












Click it and Unblock the Notifications