ಲೋಕಸಭೆ ಚುನಾವಣೆಯಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ - ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 03: ಚುನಾವಣೆ ಸರ್ವೇ ಲೆಕ್ಕಾಚಾರ ತಲೆಕೆಳಗಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಯಾವ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನಲೆಯಲ್ಲಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡದಲ್ಲಿ ಬಹುಮತ ಪಡೆದು ಬಿಜೆಪಿ ಅಧಿಕಾರ ಹಿಡಿದಿದೆ. ಈ ಫಲಿತಾಂಶಕ್ಕೆ ಲಕ್ಷಾಂತರ ಕಾರ್ಯಕರ್ತರು ದುಡಿದಿದ್ದು, ಅವರ ಶ್ರಮದ ಫಲವಾಗಿ ಈ ಫಲಿತಾಂಶ ಬಂದಿದೆ ಎಂದರು.

ಚುನಾವಣೆ ಗೆಲುವಿನ ತಂತ್ರವನ್ನು ಅಮಿತ್ ಶಾ ಅವರು ರೂಪಿಸಿದ್ದು, ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದ ಅವರು, ಈ ಚುನಾವಣಾ ಫಲಿತಾಂದ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆತ್ಮವಿಶ್ವಾಸದಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಈ ಚುನಾವಣೆ ಫಲಿತಾಂಶದಲ್ಲಿನ ಜನಾದೇಶವನ್ನು ಸ್ವೀಕರಿಸಲಿ, ಗೆದ್ದಾಗ ಜನಾದೇಶ, ಸೋತಾಗ ಇವಿಎಂ ದೋಷ ಎಂದು ಹೇಳಬಾರದು. ಸೋಲಿರಲಿ ಗೆಲುವಿರಲಿ ಜನಾದೇಶವನ್ನು ಸ್ವೀಕಾರ ಮಾಡಬೇಕು ಎಂದ ಅವರು, ಕರ್ನಾಟಕದ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೇಂದ್ರದ ನಾಯಕತ್ವ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಮುಂಚಿತವಾಗಿ ಟಿಕೆಟ್ ಘೋಷಣೆ ಮಾಡಿದ್ದು, ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಿದೆ ಎಂದರು.












Click it and Unblock the Notifications