Ragi price: ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ- ಕ್ವಿಂಟಲ್‌ಗೆ ಎಷ್ಟು? ಮಾಹಿತಿ, ವಿವರ
2023-24ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ (MSP) ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 2,183 ರೂ. ಮತ್ತು ರಾಗಿಗೆ ಪ್ರತಿ ಕ್ವಿಂಟಾಲ್‌ಗೆ 3846 ರೂಪಾಯಿ ನಿಗದಿ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕೂಡ ಇದೇ ಬೆಲೆಯಲ್ಲಿ ರಾಗಿ ಖರೀದಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ರಾಗಿ ಖರೀದಿ ಕುರಿತಂತೆ ನಡೆದ ಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ತುಮಕೂರು ಜಿಲ್ಲೆಯಾದ್ಯಂತ 11 ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಡಿಸಿ ಕೆ. ಶ್ರೀನಿವಾಸ್, "ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿ ಮಾಡಲು ಡಿಸೆಂಬರ್ 1ರಿಂದ ನೋಂದಣಿ ಆರಂಭವಾಗಲಿದ್ದು, ಜನವರಿ 1 ರಿಂದ ಮಾರ್ಚ್ 31ರವೆಗೆ ರಾಗಿ ಖರೀದಿ ಮಾಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲೆಯಾದ್ಯಂತ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲೂಕಿನಲ್ಲಿ ತಲಾ ಎರಡು ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಶಿರಾ, ತುಮಕೂರು, ಪಾವಗಡ, ತುರುವೇಕೆರೆ, ಮಧುಗಿರಿ, ಗುಬ್ಬಿ, ತಿಪಟೂರು ತಾಲೂಕುಗಳಲ್ಲಿ ತಲಾ ಒಂದು ಕೇಂದ್ರ ತೆರೆಯಲಾಗುತ್ತದೆ.
ದಲ್ಲಾಳಿಗಳಿಗೆ ಅವಕಾಶ ಕೊಡಬೇಡಿ
ರಾಗಿ ಖರೀದಿ ವೇಳೆ ದಲ್ಲಾಳಿಗಳು ಮಧ್ಯಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಖರೀದಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು, ರಾಗಿ ಗುಣಮಟ್ಟ ದೃಢೀಕರಿಸಬೇಕು. ರಾಗಿಯನ್ನು ಸಂಗ್ರಹಿಸಲು ಗೋಣಿ ಚೀಲಗಳನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಪೂರೈಸಲು ಸೂಚನೆ ನೀಡಲಾಗಿದೆ.
ರಾಗಿ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ನೋಂದಣಿ ಕಾರ್ಯಕ್ಕೆ ಸ್ಥಳಗಳನ್ನು ಗುರುತಿಸಿ ಮೊದಲೇ ರೈತರಿಗೆ ಈ ಬಗ್ಗೆ ಮಾಹಿತಿ ಸಿಗುವಂತೆ ನೋಡಿಕೊಳ್ಳಬೇಕು, ರೈತರಿಗೆ ನೋಂದಣಿಗೆ ಸಮಸ್ಯೆ ಆಗದಂತೆ ಮೊದಲೇ ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ರೈತರಿಂದ ಖರೀದಿಸುವ ರಾಗಿಯನ್ನು ಶೇಖರಿಸುವ ಗೋದಾಮುಗಳ ಗುಣಮಟ್ಟ ಪರೀಕ್ಷೆ ಮಾಡಲು ಅಧಿಕಾರಿಗಳಿಗೆ ಹೇಳಲಾಗಿದೆ. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 2,183 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು, ಭತ್ತ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತದೆ.












Click it and Unblock the Notifications