ಡಿಗ್ರಿ ಕಾಲೇಜುಗಳಲ್ಲಿ ಊಟದ ವಿರಾಮ ಸಮಯ ಏರಿಕೆ
ಬೆಂಗಳೂರು, ಫೆಬ್ರವರಿ 1: ಡಿಗ್ರಿ ಕಾಲೇಜುಗಳಲ್ಲಿ ಊಟದ ವಿರಾಮ ಸಮಯವನ್ನು ಕಾಲೇಜು ಶಿಕ್ಷಣ ಇಲಾಖೆ ಹೆಚ್ಚಿಸಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ ಎಲ್ಲಾ ಮಾದರಿಯ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 45 ನಿಮಿಷ ಊಟದ ವಿರಾಮವನ್ನು ವೇಳಾಪಟ್ಟಿಯಲ್ಲಿ ಕಡ್ಡಾಯವಾಗಿ ನಿಗದಿ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪ್ರತಿದಿನ ದೈಹಿಕ ಶಿಕ್ಷಣ ಬೋಧಿಸಲು ಒಂದು ಗಂಟೆಯ ತರಗತಿಯನ್ನು ನಿಗದಿ ಮಾಡಬೇಕು. ಬೇರೊಂದು ವಿಷಯ ಬೋಧಿಸುವ ಪ್ರಾಧ್ಯಾಪಕರು ರಜೆ/ವಿಶೇಷ ಕಾರ್ಯ ನಿಮಿತ್ತ ತೆರಳಿದ್ದಲ್ಲಿ ಅವರ ನಿಗದಿತ ಸಮಯವನ್ನು ದೈಹಿಕ ಶಿಕ್ಷಣ ಬೋಧನೆಗೆ, ಕ್ರೀಡೆ, ಯೋಗ, ದೈಹಿಕ ಮತ್ತು ಆರೋಗ್ಯ ಶಿಕ್ಷಣ ನೀಡಲು ಬಳಕೆ ಮಾಡಿಕೊಳ್ಳಬೇಕು.

ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಇತ್ತೀಚೆಗೆ ಕಾಲೇಜುಗಳ ಪರಿಶೀಲನೆಗೆ ಭೇಟಿ ನೀಡಿದ್ದ ವೇಳೆ ಊಟದ ವಿರಾಮವನ್ನು 10-15 ನಿಮಿಷಗಳು ಮಾತ್ರ ನಿಗದಿ ಮಾಡಿರುವುದು ಕಂಡುಬಂದಿದೆ.
ವಿದ್ಯಾರ್ಥಿಗಳಿಗೆ ಊಟ ಮಾಡುವುದಕ್ಕೂ ಸರಿಯಾದ ಸಮಯ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ 45 ನಿಮಿಷ ಊಟದ ವಿರಾಮ ನೀಡುವಂತೆ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕಾಲೇಜಿನ ಗ್ರಂಥಾಲಯದಲ್ಲಿ ಹೆಚ್ಚಿನ ಓದಿಗಾಗಿ ವಾರಕ್ಕೆ ಕನಿಷ್ಠ ಒಂದು ಗಂಟೆ ಅವಧಿಯನ್ನು ಮೀಸಲಿಡಬೇಕು ಎಂದು ಹೇಳಲಾಗಿದೆ.












Click it and Unblock the Notifications