BREAKING: ಎಚ್ಚರ.. ಡೆಂಗ್ಯೂ ʼಸಾಂಕ್ರಾಮಿಕ ರೋಗʼ ಎಂದು ಘೋಷಿಸಿದ ಸರ್ಕಾರ
ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ರೋಗʼ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆ ಕೂಡ ಪ್ರಕಟಿಸಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ, ಅಧಿಸೂಚನೆ ಹೊರಡಿಸಿದೆ.
ಆರೋಗ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಸೋಮವಾರ ಹೊಸದಾಗಿ 147 ಮಂದಿಗೆ ಡೆಂಗ್ಯೂ ಇರುವುದು ಕನ್ಫರ್ಮ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ 1,138 ಡೆಂಗ್ಯೂ ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ ದೃಢಪಟ್ಟ ಡೆಂಗ್ಯೂ ಕೇಸ್‌ನಲ್ಲಿ ಐದು ಮಂದಿ ಒಂದು ವರ್ಷದೊಳಗಿನವರು ಎನ್ನಲಾಗಿದೆ. 35 ಮಂದಿ 18 ವರ್ಷದೊಳಗಿನವರು ಹಾಗೂ 107 ಜನ 18 ವರ್ಷ ಮೇಲ್ಪಟ್ಟವರು ಎನ್ನಲಾಗಿದೆ. ರಾಜ್ಯದಲ್ಲಿ ಈವರೆಗೆ 25,408 ಡೆಂಗ್ಯೂ ಕೇಸ್‌ಗಳು ವರದಿಯಾಗಿವೆ. ಪ್ರಸ್ತುತ ರಾಜ್ಯದಾದ್ಯಂತ 1,569 ಡೆಂಗ್ಯೂ ಕೇಸ್‌ಗಳು ಸಕ್ರಿಯವಾಗಿವೆ.

ಹಾಗಾಗಿ, ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಡೆಂಗ್ಯೂ ಜ್ವರವನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ರೋಗʼ ಎಂದು ಅಧಿಕೃತವಾಗಿ ಘೋಷಿಸಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆಗೆ ಕಳೆದ ವಾರದಿಂದ ಝಿಕಾ ವೈರಸ್ ಕೂಡ ತಾಂಡವವಾಡುತ್ತಿದೆ. ನಗರದ ಜಿಗಣಿ ಪ್ರದೇಶದಲ್ಲೇ ಐದು ಝಿಕಾ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿತ್ತು. ಇದರ ಜೊತೆ ಜೊತೆಗೆ ಡೆಂಗ್ಯೂ ಕೇಸ್‌ಗಳು ಕೂಡ ಏರುತ್ತಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.
ಡೆಂಗ್ಯೂ ಲಕ್ಷಣಗಳನ್ನು ನೋಡುವುದಾದರೆ.. ಸ್ನಾಯು ಮತ್ತು ಕೀಲು ನೋವು, ತೀವ್ರ ತಲೆನೋವು, ಅಧಿಕ ಜ್ವರ, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ದದ್ದುಗಳು ಬರುವುದು, ವಾಕರಿಕೆ ಮತ್ತು ವಾಂತಿ ಬರುವುದು, ಗ್ರಂಥಿಗಳು ಊದಿಕೊಳ್ಳುವುದು. ಒಂದು ವೇಳೆ ನಿಮ್ಮಲ್ಲೂ ಈ ಲಕ್ಷಣಗಳು ಕಂಡು ಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ನೀವೇನು ಮಾಡಬಹುದು?: ನಿಮ್ಮ ಮನೆಯ ಸುತ್ತ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ. ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ಸೊಳ್ಳೆ ಬತ್ತಿ ಹಚ್ಚಿರಿ ಅಥವಾ ಸೊಳ್ಳೆ ಪರದೆಯನ್ನು ಸುರಕ್ಷತೆಗೆ ಬಳಸಿಕೊಳ್ಳಬಹುದು. ಕೈ, ಕಾಲಿಗೆ ಸೊಳ್ಳೆ ನಿವಾರಕ ಲೋಶನ್ ಅಥವಾ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ.
ಇದರಿಂದ ಡೆಂಗ್ಯೂ ಜ್ವರ ಬರದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು. ಸಾಧ್ಯವಾದಷ್ಟು ಮೈ ತುಂಬಾ ಬಟ್ಟೆ ಧರಿಸಿ. ಡೆಂಗ್ಯೂ ಜ್ವರದ ಲಕ್ಷಣ ಕಂಡುಬಂದರೆ ಗಾಬರಿಯಾಗದೆ, ವೈದ್ಯರನ್ನು ಭೇಟಿ ಮಾಡಿ. ಅವರ ಸೂಚನೆಯನ್ನು ಸರಿಯಾಗಿ ಪಾಲಿಸಿದರೆ ಡೆಂಗ್ಯೂದಿಂದ ಶೀಘ್ರ ಗುಣಮುಖ ಆಗಬಹುದು. ಇದೀಗ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವುದರಿಂದ ತಪ್ಪದೇ ಎಚ್ಚರ ವಹಿಸಿ...












Click it and Unblock the Notifications