KSRTC ಐರಾವತ ಬಸ್ ಮೇಲಿರುವ ಮುದ್ದಾದ ಮಗು ಯಾರು ಗೊತ್ತಾ? 2 ದಶಕಗಳ ಜಾಹೀರಾತಿನ ರೋಚಕ ಕಥೆ
ಕೆಎಸ್‌ಆರ್‌ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳ ಮೇಲೆ ಮುದ್ದಾಗಿ ನಿದ್ದೆ ಮಾಡುತ್ತಿರುವ ಮಗುವಿನ ಚಿತ್ರವನ್ನ ಕರ್ನಾಟಕದವರು ರಸ್ತೆಯಲ್ಲಿ ಹೋಗುವಾಗ ಒಮ್ಮೆಯಾದರೂ ನೋಡಿಯೇ ಇರುತ್ತಾರೆ. ಸುಮಾರು ಎರಡು ದಶಕಗಳ ಹಿಂದೆ ಕ್ಲಿಕ್ ಮಾಡಿದ ಈ ಸುಂದರ ಛಾಯಾಚಿತ್ರ ಇಂದಿಗೂ ಪ್ರಯಾಣಿಕರ ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೊಂದು ಕೇವಲ ಜಾಹೀರಾತಾಗಿ ಉಳಿಯದೆ, ಕರ್ನಾಟಕದ ಸಾರಿಗೆ ವ್ಯವಸ್ಥೆಯ ಒಂದು ಜನಪ್ರಿಯ ಸಂಕೇತವಾಗಿ ಮಾರ್ಪಟ್ಟಿದೆ.
ಕೆಎಸ್‌ಆರ್‌ಟಿಸಿ ಐರಾವತ ಜಾಹೀರಾತು: ಹಿನ್ನೆಲೆ ಮತ್ತು ಕಲ್ಪನೆ
ಈ ಚಿತ್ರವನ್ನ ಸೆರೆಹಿಡಿದವರು ಬೆಂಗಳೂರು ಮೂಲದ ಪ್ರಸಿದ್ಧ ವಾಣಿಜ್ಯ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಮುರುಗಾನಂದನ್. ಇತ್ತೀಚೆಗೆ ಅವರು ಈ ಬಸ್ಸಿನ ವಿಡಿಯೋವೊಂದನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ನೋಡನೋಡುತ್ತಿದ್ದಂತೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡು ಮತ್ತೆ ವೈರಲ್ ಆಗಿದೆ.

'ಓಗಿಲ್ವಿ ಅಂಡ್ ಮ್ಯಾಥರ್' ಎಂಬ ಖ್ಯಾತ ಜಾಹೀರಾತು ಸಂಸ್ಥೆ 'ಮಲ್ಟಿ-ಆಕ್ಸಲ್ ಕಂಫರ್ಟ್‌ನೊಂದಿಗೆ ಮಗುವಿನಂತೆ ನಿದ್ರಿಸಿ' ಎಂಬ ಘೋಷವಾಕ್ಯದೊಂದಿಗೆ ಈ ಪ್ರಚಾರವನ್ನ ಆರಂಭಿಸಿತ್ತು. ರಸ್ತೆ ಬದಿಯ ಜಾಹೀರಾತು ಫಲಕಗಳನ್ನ ಬಳಸುವ ಬದಲು, ಬಸ್ಸನ್ನೇ ಒಂದು ಜಾಹೀರಾತು ಮಾಧ್ಯಮವಾಗಿ ಪರಿವರ್ತಿಸುವ ಅದ್ಭುತ ಉದ್ದೇಶದಿಂದ ಈ ಕಾನ್ಸೆಪ್ಟ್ ಅನ್ನ ರೂಪಿಸಲಾಗಿತ್ತು.
ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಅವರಿಗೆ ಎದುರಾದ ಸವಾಲುಗಳು
ಮಕ್ಕಳ ಫೋಟೋಗ್ರಫಿಯಲ್ಲಿ ಸೆಂಥಿಲ್ ಕುಮಾರ್ ಅವರಿಗಿದ್ದ ಅಪಾರ ಅನುಭವದ ಕಾರಣದಿಂದಲೇ ಜಾಹೀರಾತು ಸಂಸ್ಥೆ ಅವರನ್ನ ಸಂಪರ್ಕಿಸಿತ್ತು. ಆದರೆ ಒಂದು ಮಗುವಿನ ಫೋಟೋವನ್ನ ಅಂದುಕೊಂಡ ರೀತಿಯಲ್ಲಿಯೇ ತೆಗೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮಗು ಸ್ಟುಡಿಯೋಗೆ ಬಂದಾಗ ಎಚ್ಚರವಾಗಿತ್ತು. ತಾಯಿ ಹಾಲುಣಿಸಿ, ಮಗು ಆಳವಾದ ನಿದ್ದೆಗೆ ಜಾರುವವರೆಗೂ ಇಡೀ ಚಿತ್ರೀಕರಣ ತಂಡ ತಾಳ್ಮೆಯಿಂದ ಕಾಯಬೇಕಾಯಿತು.
ಮಗು ನಿದ್ದೆ ಮಾಡಿದ ತಕ್ಷಣ, ಮೊದಲೇ ಸಿದ್ಧಪಡಿಸಿದ್ದ ಸ್ಟ್ರಾಲರ್ (ಮಕ್ಕಳ ಗಾಡಿ), ಕಂದು ಬಣ್ಣದ ಟೆಡ್ಡಿ ಬೇರ್ ಮತ್ತು ಹಳದಿ ಬಣ್ಣದ ರಬ್ಬರ್ ಡಕ್ ಜೊತೆಗೆ ಈ ಅದ್ಭುತ ಚಿತ್ರವನ್ನ ಸೆರೆಹಿಡಿಯಲಾಯಿತು. ಸ್ಟ್ರಾಲರ್ ಚಕ್ರ ಮತ್ತು ಬಸ್ಸಿನ ಚಲನೆಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಈ ಚಿತ್ರದ ಕಾಂಪೋಸಿಷನ್ ಮಾಡಲಾಗಿತ್ತು. ಇದು ರಸ್ತೆಯಲ್ಲಿ ಕೇವಲ ಕೆಲವು ಸೆಕೆಂಡುಗಳ ಕಾಲ ಬಸ್ಸನ್ನ ನೋಡುವವರಿಗೂ ತಕ್ಷಣ ಅರ್ಥವಾಗುವಂತೆ ವಿನ್ಯಾಸಗೊಳಿಸಲಾಗಿತ್ತು.
ಕೆಎಸ್‌ಆರ್‌ಟಿಸಿ ಬಸ್ ಜಾಹೀರಾತಿನಲ್ಲಿರುವ ಆ ಮಗು ಯಾರು?
ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ನವೆಂಬರ್ 25, 2010 ರಂದು ಮೊದಲ ಬಾರಿಗೆ KA-01-F-9133 ನೋಂದಣಿ ಸಂಖ್ಯೆಯ ಐರಾವತ ಕ್ಲಬ್ ಕ್ಲಾಸ್ ಬಸ್ ಬೆಂಗಳೂರು-ತಿರುಪತಿ ಮಾರ್ಗದಲ್ಲಿ ಈ ಸುಂದರ ಜಾಹೀರಾತಿನೊಂದಿಗೆ ಸಂಚಾರ ಆರಂಭಿಸಿತು.
ಆದರೆ ಇಂದಿಗೂ ಎಲ್ಲರನ್ನೂ ಕಾಡುವ ಏಕೈಕ ಪ್ರಶ್ನೆ ಎಂದರೆ, ಆ ಫೋಟೋದಲ್ಲಿರುವ ಮಗು ಯಾರು ಎಂಬುದು. ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಅವರ ಪ್ರಕಾರ, ಫೋಟೋ ಶೂಟ್ ಆದ ನಂತರ ಆ ಮಗುವಿನ ಗುರುತು ಇಂದಿಗೂ ಪತ್ತೆಯಾಗಿಲ್ಲ.
ಕಳೆದ ಹಲವು ವರ್ಷಗಳಿಂದ ಈ ಚಿತ್ರವನ್ನ ನಿರಂತರವಾಗಿ ಮುದ್ರಿಸುತ್ತಿರುವುದರಿಂದ ಅದರ ಗುಣಮಟ್ಟ ಕಡಿಮೆಯಾಗಿರಬಹುದು ಎಂದು ಭಾವಿಸಿರುವ ಸೆಂಥಿಲ್, ಭವಿಷ್ಯದಲ್ಲಿ ಈ ಪ್ರಚಾರವನ್ನ ಉತ್ತಮವಾಗಿ ಉಳಿಸಿಕೊಳ್ಳಲು ಮೂಲ ಚಿತ್ರದ ಹೈ-ರೆಸಲ್ಯೂಶನ್ ಕಾಪಿಯನ್ನು ಬಳಸುವಂತೆ ಕೆಎಸ್‌ಆರ್‌ಟಿಸಿಗೆ ಮನವಿ ಮಾಡಿದ್ದಾರೆ.
ಸರಳತೆ ಮತ್ತು ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವುದೇ ಈ ಜಾಹೀರಾತಿನ ಯಶಸ್ಸಿಗೆ ಮುಖ್ಯ ಕಾರಣ ಎನ್ನುತ್ತಾರೆ ಸೆಂಥಿಲ್. "ಮಕ್ಕಳನ್ನು ಒಳಗೊಂಡ ಯಾವುದೇ ವಿಷಯವು ಜನರಿಗೆ ಬೇಗನೆ ಹತ್ತಿರವಾಗುತ್ತದೆ. ತಕ್ಷಣ ಗಮನ ಸೆಳೆಯುವ ಇಂತಹ ಸರಳ ಐಡಿಯಾಗಳು ಯಾವಾಗಲೂ ಗೆಲ್ಲುತ್ತವೆ" ಎಂದು ಅವರು ವಿವರಿಸುತ್ತಾರೆ.
ಇಂದಿನ ದಿನಗಳಲ್ಲಿ ಈ ಜಾಹೀರಾತನ್ನ ಮರುಸೃಷ್ಟಿಸಲು ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದಾಗ, "ಪ್ರತಿಯೊಂದು ಪ್ರಸಿದ್ಧ ಬ್ರ್ಯಾಂಡ್ ಜನರು ಗುರುತಿಸಿಕೊಳ್ಳುವ ಒಂದು ನಿರ್ದಿಷ್ಟ ಚಿತ್ರವನ್ನ ಹೊಂದಿರುತ್ತದೆ. ನಾವು ಬೇರೊಂದು ಮಗು ಅಥವಾ ಸ್ಟ್ರಾಲರ್ ಬಳಸಬಹುದು, ಆದರೆ ಆ ಮೂಲ ಭಾವನೆ ಹಾಗೆಯೇ ಉಳಿಯಬೇಕು. ಆದ್ದರಿಂದ ಮೂಲ ಕಲ್ಪನೆಯನ್ನ ಬದಲಾಯಿಸುವ ಅಗತ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸುತ್ತಾರೆ.


Click it and Unblock the Notifications
