ಜಂಕ್ ಫುಡ್ ತಿಂದರೆ ಹೊಟ್ಟೇಲಿ ಹುಳುಗಳಾಗುತ್ತವೆ ಎಂದು ನಕಲಿ ಸ್ಕ್ಯಾನಿಂಗ್ ಮಾಡಿ ಮಕ್ಕಳಿಗೆ ತೋರಿಸಿದ ಶಿಕ್ಷಕಿ, ವಿಡಿಯೋ ವೈರಲ್
ಮಕ್ಕಳು ಜಂಕ್ ಫುಡ್ ತಿನ್ನುವುದನ್ನ ಬಿಡಿಸಲು ಪೋಷಕರು ಹರಸಾಹಸ ಪಡುತ್ತಾರೆ. ಇನ್ನೂ ಈ ಚಿಪ್ಸ್, ಚಾಕೊಲೇಟ್, ಬಿಸ್ಕೆಟ್ ಎಂದರೆ ಮಕ್ಕಳಿಗೆ ಪಂಚಪ್ರಾಣ. ಆದರೆ ಇದು ಅವರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿಹೇಳಲು ಶಿಕ್ಷಕಿಯೊಬ್ಬರು ಬಳಸಿದ ವಿಚಿತ್ರ ತಂತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶಾಲಾ ಮಕ್ಕಳಿಗೆ ಈ ಜಂಕ್ ಫುಡ್‌ಗಳ ಬಗ್ಗೆ ಅರಿವು ಮೂಡಿಸುವ ಭರದಲ್ಲಿ ಶಿಕ್ಷಕಿ ನಕಲಿ ಅಲ್ಟ್ರಾಸೌಂಡ್ ಬಳಸಿ ಹೊಟ್ಟೆಯಲ್ಲಿ ಹುಳುಗಳು ಇವೆ ಎಂದು ತೋರಿಸಿ ಮಕ್ಕಳನ್ನು ಭಯಭೀತರನ್ನಾಗಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಎಕ್ಸ್ ಖಾತೆಯಲ್ಲಿ ನೀತು ಖಂಡೇವಾಲ್ ಎಂಬುವವರು 39 ಸೆಕೆಂಡುಗಳ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ಶಾಲಾ ತರಗತಿಯೊಂದರಲ್ಲಿ ಶಿಕ್ಷಕಿ ನಕಲಿ ಅಲ್ಟ್ರಾಸೌಂಡ್ ಯಂತ್ರವನ್ನ ಬಳಸಿ ಪ್ರೆಸೆಂಟೇಶನ್ ನೀಡುತ್ತಿರುವುದನ್ನ ಕಾಣಬಹುದು.
ಒಬ್ಬ ವಿದ್ಯಾರ್ಥಿಯನ್ನ ಬೆಂಚ್ ಮೇಲೆ ಮಲಗಿಸಿ, ಆತನ ಹೊಟ್ಟೆಯ ಮೇಲೆ ಸ್ಕ್ಯಾನಿಂಗ್ ಯಂತ್ರದ ಮಾದರಿಯನ್ನ ಇಟ್ಟು, ಪರದೆಯ ಮೇಲೆ ವಿಡಿಯೋ ಪ್ಲೇ ಮಾಡಿದ್ದಾರೆ. ಆ ಪರದೆಯ ಮೇಲೆ ಹೊಟ್ಟೆಯಲ್ಲಿ ಹುಳುಗಳು ಹರಿದಾಡುತ್ತಿರುವ ದೃಶ್ಯವಿತ್ತು. ಚಿಪ್ಸ್, ಬಿಸ್ಕೆಟ್ ಮತ್ತು ಚಾಕೊಲೇಟ್‌ಗಳಂತಹ ಜಂಕ್ ಫುಡ್ ತಿಂದರೆ ಹೀಗೆ ಹೊಟ್ಟೆಯಲ್ಲಿ ಅಪಾಯಕಾರಿ ಹುಳುಗಳು ಉತ್ಪತ್ತಿಯಾಗುತ್ತವೆ ಎಂದು ಶಿಕ್ಷಕಿ ಹೇಳಿದ್ದಾರೆ.
ಭಯಭೀತರಾಗಿ ಕಣ್ಣೀರು ಹಾಕಿದ ಶಾಲಾ ಮಕ್ಕಳು
ಶಿಕ್ಷಕಿಯ ಈ ಪ್ರೆಸೆಂಟೇಶನ್ ತರಗತಿಯಲ್ಲಿದ್ದ ಪುಟ್ಟ ಮಕ್ಕಳು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದರು. ಆದರೆ ಪರದೆಯ ಮೇಲಿನ ಆ ದೃಶ್ಯವನ್ನ ನೋಡಿ ಮಕ್ಕಳ ಮುಖಭಾವ ಬದಲಾಯಿತು. ಅನೇಕ ಮಕ್ಕಳು ಭಯದಿಂದ ಕಣ್ಣರಳಿಸಿ ನೋಡುತ್ತಿದ್ದರೆ, ಇನ್ನು ಕೆಲವರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಕೆಲವು ಮಕ್ಕಳಂತೂ ಈ ದೃಶ್ಯ ನೋಡಿ ಕಣ್ಣೀರು ಹಾಕುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಜಂಕ್ ಫುಡ್ ತಿನ್ನುವುದನ್ನ ಬಿಡಿಸುವ ಉದ್ದೇಶ ಒಳ್ಳೆಯದೇ ಆಗಿದ್ದರೂ, ಶಿಕ್ಷಕಿ ಅನುಸರಿಸಿದ ಈ ಮಾರ್ಗ ಮಕ್ಕಳ ಎಳೆಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂಬ ಆರೋಪ ಕೇಳಿಬಂದಿದೆ.
The intention may be good, but the method matters.
— Neetu Khandelwal (@T_Investor_) September 11, 2026
A viral school clip shows a teacher using props and a fake ultrasound to scare children away from junk food.
Teaching kids healthy eating is important. But fear, misinformation and shock tactics at such a tender age can leave a… pic.twitter.com/SgNgqRBgKj
ನೆಟ್ಟಿಗರ ಆಕ್ರೋಶ
ವಿಡಿಯೋ ಹಂಚಿಕೊಂಡಿರುವ ನೀತು ಖಂಡೇವಾಲ್ ಅವರು, "ಮಕ್ಕಳಿಗೆ ಆರೋಗ್ಯಕರ ಆಹಾರ ಪದ್ಧತಿಯನ್ನ ಕಲಿಸುವ ಉದ್ದೇಶ ಒಳ್ಳೆಯದಿರಬಹುದು, ಆದರೆ ಅದನ್ನ ಕಲಿಸುವ ವಿಧಾನವೂ ಅಷ್ಟೇ ಮುಖ್ಯವಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನ ಭಯಪಡಿಸುವುದು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಬಹುದು. ಅವರಿಗೆ ಆರೋಗ್ಯಕರ ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಬೇಕೇ ಹೊರತು, ತಪ್ಪು ಮಾಹಿತಿಯ ಮೂಲಕ ಭಯಪಡಿಸಿ ಪಾಲಿಸುವಂತೆ ಮಾಡಬಾರದು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಂಕ್ ಫುಡ್ ತಡೆಯಲು ಭಯದ ತಂತ್ರ ಸರಿಯೇ?
ಈ ವಿಡಿಯೋ ಇದೀಗ ವೀಕ್ಷಕರಲ್ಲಿ ಪರ ವಿರೋಧದ ಚರ್ಚೆಯನ್ನ ಹುಟ್ಟುಹಾಕಿದೆ. ಕೆಲವರು ಶಿಕ್ಷಕಿಯ ಈ ತಂತ್ರವನ್ನು ಬೆಂಬಲಿಸಿದ್ದಾರೆ. "ಮಕ್ಕಳಿಗೆ ಜಂಕ್ ಫುಡ್ ಬಗ್ಗೆ ಭಯ ಮೂಡಿಸುವುದು ಅಗತ್ಯ. ಹಿಂದಿನ ಕಾಲದಲ್ಲಿ ಊಟ ಮಾಡದಿದ್ದರೆ ಗುಮ್ಮ ಬರುತ್ತಾನೆ ಎಂದು ಹೆದರಿಸುತ್ತಿದ್ದಂತೆ ಇದೂ ಒಂದು ತಂತ್ರವಷ್ಟೇ" ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಬಹುಪಾಲು ಜನರು ಈ ಕ್ರಮವನ್ನು ಖಂಡಿಸಿದ್ದಾರೆ. ತಪ್ಪು ಮಾಹಿತಿಯ ಮೂಲಕ ಮಕ್ಕಳಲ್ಲಿ ಆತಂಕ ಸೃಷ್ಟಿಸುವುದು ಸರಿಯಲ್ಲ. ಇದು ಆರೋಗ್ಯಕರ ಶಿಕ್ಷಣದ ಲಕ್ಷಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications
