ಜೆಡಿಎಸ್ 2ನೇ ಪಟ್ಟಿ: ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಕನಸು ಭಗ್ನ
ಚಿಕ್ಕಮಗಳೂರು, ಏಪ್ರಿಲ್ 18: ಕಾಂಗ್ರೆಸ್ ಟಿಕೆಟ್ ಪಡೆಯಲು ವಿಫಲವಾಗಿದ್ದ ಹಾಲಿ ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ಪಕ್ಷದ ವಿರುದ್ಧ ಬಂಡಾಯವೆದ್ದು ಬುಧವಾರ ಜೆಡಿಎಸ್ ಸೇರಿದ್ದರು. ಆದರೆ ದುರಾದೃಷ್ಟಕ್ಕೆ ಅವರಿಗೆ ಜೆಡಿಎಸ್ ಟಿಕೆಟ್ ಕೂಡ ಸಿಕ್ಕಿಲ್ಲ. ಹೀಗಾಗಿ ಜೆಡಿಎಸ್ ನಿಂದ ಸ್ಪರ್ಧಿಸುವ ಅವರ ಕನಸು ಭಗ್ನವಾಗಿದೆ.
ಶ್ರೀನಿವಾಸ್ ಜೆಡಿಎಸ್ ಸೇರಿದ್ದು ಮೂಲ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಜಾತ್ಯಾತೀತ ಜನತಾ ದಳದಿಂದ ಶ್ರೀನಿವಾಸ್ ಗೆ ತರೀಕೆರೆ ಕ್ಷೇತ್ರದ ಟಿಕೆಟ್ ನೀಡುವುದಕ್ಕೆ ಮೂಲ ಜೆಡಿಎಸ್ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಈ ಹಿನ್ನೆಲೆಯಲ್ಲಿ ತರೀಕೆರೆಯ ಜಾತ್ಯಾತೀತ ಜನತಾದಳದ ನಾಯಕರು ಬಂಡಾಯವೆದ್ದಿದ್ದರು. ಮತ್ತು ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.

ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ.ಎಚ್.ಶಿವಶಂಕರಪ್ಪ ಅವರು ಪಕ್ಷಕ್ಕೆ ಗುಡ್ ಬೈ ಕೂಡ ಹೇಳಿದ್ದರು. ಪಕ್ಷೇತರರಾಗಿ ತರೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದರು.
ಆದರೆ ಇಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಮೂಲ ಜೆಡಿಎಸ್ ನ ಟಿ.ಎಚ್. ಶಿವಶಂಕರಪ್ಪ ಅವರಿಗೇ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಜೆಡಿಎಸ್ ಗೆ ಬಂದಿದ್ದ ಶ್ರೀನಿವಾಸ್ ಗೆ ಇಲ್ಲೂ ನಿರಾಸೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಅವರೀಗ ಒಂದೋ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಿದೆ. ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಬೇಕಾಗಿದೆ.
ತರೀಕೆರೆಯಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಎಚ್. ಶ್ರೀನಿವಾಸ ಗೆಲುವು ಸಾಧಿಸಿದ್ದರು. 35,817 ಮತಗಳನ್ನು ಪಡೆದಿದ್ದ ಅವರು 899 ಮತಗಳ ಅಲ್ಪ ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದರು.
ಶ್ರೀನಿವಾಸ್ ಅವರಿಗೆ ಭಾರೀ ಪೈಪೋಟಿ ನೀಡಿದ್ದ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ 34,918 ಮತಗಳನ್ನು ಪಡೆದಿದ್ದರು. ಇಲ್ಲಿ ಇದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಎಚ್.ಎಂ.ಗೋಪಿಕೃಷ್ಣ 34,554 ಮತಗಳನ್ನು ಪಡೆದು ಇಬ್ಬರಿಗೂ ಭಾರೀ ಪೈಪೋಟಿ ನೀಡಿದ್ದರು.
ಇದೇ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಎಸ್.ಎಂ. ನಾಗರಾಜು ಅವರಿಗೆ ಟಿಕೆಟ್ ನೀಡಿದೆ. ಬಹುಶಃ ಈ ಬಾರಿ ಶ್ರೀನಿವಾಸ ಸೋಲಬಹುದು ಎಂಬ ಭಯದಲ್ಲಿ ಕಾಂಗ್ರೆಸ್ ಟಿಕೆಟ್ ಬದಲಾಯಿಸಿರುವ ಸಾಧ್ಯತೆ ಇದೆ.












Click it and Unblock the Notifications