ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!

|
Google Oneindia Kannada News

ಬೆಂಗಳೂರು, ಫೆ. 14: ಗಡಿ ಸಮಸ್ಯೆ ಖ್ಯಾತೆ ತೆಗೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮದೇ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಳಗಾವಿಯ ಗಡಿಯಲ್ಲಿರುವ, ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಶಿವಸೇನೆ ಹಾಗೂ ಎಂಇಎಸ್ ಪುಂಡರಿಗೆ ಬುದ್ದಿ ಕಲಿಸಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ಭೇಟಿ ನೀಡಿದ್ದರು. ಮೂರು ಸರ್ಕಾರಿ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಇದೇ ಮೊದಲ ಬಾರಿಗೆ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಜಾಂಬೋಟಿ, ನಂದಗಡ, ಮಂಗೇನಕೊಪ್ಪ ಗ್ರಾಮದಲ್ಲಿರುವ ಮರಾಠಿ ಶಾಲೆಗಳಿಗೆ ಭೇಟಿ ನೀಡಿದರು.

ಜಾಂಬೋಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ ಭೇಟಿ ನೀಡಿದ ಅವರು, ಮರಾಠಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು, ಇದೇ ವೇಳೆ ಮರಾಠಿ ವಿದ್ಯಾರ್ಥಿಗಳೊಂದಿಗೆ ನಾಡಗೀತೆ ಹಾಡಿದ ಸಚಿವ ಸುರೇಶ್ ಕುಮಾರ್ ಗಡಿಭಾಗದಲ್ಲಿ ಇತಿಹಾಸ ಸೃಷ್ಟಿಸಿದರು.

ಮರಾಠಿ ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿದ ಹಿನ್ನಲೆಯಲ್ಲಿ, ಈ ಬಗ್ಗೆ ಖುದ್ದು ಮರಾಠಿ ಮಾಧ್ಯಮ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿಸಿ ಪರಿಶೀಲನೆ ಮಾಡಿದರು. ಮಹಾರಾಷ್ಟ್ರ ನಾಯಕರು ಪ್ರಬುದ್ಧರಾಗೋದು ಒಳ್ಳೆಯದು. ಅವರು ಪ್ರಬುದ್ಧರಾಗೋದು ಅವರ ರಾಜ್ಯ, ಸಮಾಜದ ದೃಷ್ಟಿಯಿಂದ ಒಳ್ಳೆಯದು ಎಂದು ಜಾಂಬೋಟಿ ಗ್ರಾಮದಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಆಶಯ

ಪ್ರಧಾನಿ ನರೇಂದ್ರ ಮೋದಿ ಆಶಯ

ಹಳೆಯ ವಿಷಯ ಮತ್ತೆ ಮತ್ತೆ ಕೆಣಕುವುದು ಯೋಗ್ಯ ಲಕ್ಷಣವಲ್ಲ, ಸರ್ಕಾರಗಳು ಹೆಚ್ಚು ಪ್ರಬುದ್ಧರಾಗಿ ನಡೆದುಕೊಳ್ಳಬೇಕು. ಗಡಿ ಸಮಸ್ಯೆ, ಭಾಷಾ ಸಮಸ್ಯೆ ಸಮಾಜದ ಅಭಿವೃದ್ಧಿಗೆ ಅಡ್ಡಿ ಬರಬಾರದು. ಹಳೇ ವಿಷಯವಿಟ್ಟುಕೊಂಡು ಚರ್ಚಿಸೋದು ಬಿಡಿ ಅಂತಾ ಪ್ರಧಾನಿ ಮೋದಿ ಅವರೇ ಪದೇಪದೇ ಹೇಳುತ್ತಾರೆ. ಅಭಿವೃದ್ಧಿ ಕುರಿತು ಹೊಸ ಸ್ಪರ್ಧೆಗೆ ಇಳಿಯಿರಿ ಅಂತಾ ಹೇಳುತ್ತಿರುತ್ತಾರೆ. ಒಳ್ಳೆಯ ಆಡಳಿತ ಮಾಡಲಾಗದವರು ಆಗಾ ವಿಷಯ ಬೇರೆಡೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದರು.

ಕರ್ನಾಟಕದಲ್ಲಿ ಕನ್ನಡ ಕಡ್ಡಾಯ

ಕರ್ನಾಟಕದಲ್ಲಿ ಕನ್ನಡ ಕಡ್ಡಾಯ

ಯಾವುದೇ ಭಾಷೆ ಇರಲಿ ಮಕ್ಕಳು ಮಕ್ಕಳೇ. ಯಾವುದೇ ಭಾಷೆಯಲ್ಲಿ ಮಕ್ಕಳು ಕಲಿತಿದ್ದರೂ ಕನ್ನಡ ಒಂದು ಭಾಷೆಯನ್ನಾಗಿ ಕಲಿಯಲೇಬೇಕು. ಇದು ರಾಜ್ಯದ ಎಲ್ಲಾ ಶಾಲೆಗೆ ಅನ್ವಯವಾಗುತ್ತೆ ಅದಕ್ಕಾಗಿ ಕಾಯ್ದೆ ಸಹ ತಂದಿದ್ದೀವಿ. ಅವಕಾಶ ಸಿಕ್ಕಾಗ ಗಡಿಭಾಗದ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಮೊನ್ನೆ ಆಂಧ್ರದ ಗಡಿಭಾಗ, ನಿನ್ನೆ ತಮಿಳುನಾಡಿನ ಗಡಿಭಾಗಕ್ಕೆ ಭೇಟಿ ನೀಡಿದ್ದೆ, ಇಂದು ಕರ್ನಾಟಕ ಮಹಾರಾಷ್ಟ್ರ ಗಡಿಭಾಗಕ್ಕೆ ಭೇಟಿ ನೀಡಿದ್ದೇನೆ. ವಿಶೇಷವಾಗಿ ಈ ಭಾಗದ ಶಿಕ್ಷಕರಲ್ಲಿ ಚೈತನ್ಯ ತುಂಬಬೇಕು. ಮುಂದಿನವಾರ ಯಾದಗಿರಿ ಬಳಿಯ ಮಹಾರಾಷ್ಟ್ರ ಗಡಿ ಭಾಗಕ್ಕೆ ಭೇಟಿ ನೀಡುವೆ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಹಳೆಯ ಕಟ್ಟಡಗಳು

ಹಳೆಯ ಕಟ್ಟಡಗಳು

ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಬೇಕು. ನಮ್ಮ ಶಾಲೆಗಳಲ್ಲಿ ಅನೇಕ ಸಮಸ್ಯೆಗಳಿವೆ, 50 ವರ್ಷದ ಹಳೆಯದಾದ ಕಟ್ಟಡಗಳಿವೆ. ಸರ್ಕಾರಿ ಶಾಲೆಗಳಿಗೆ ಶಕ್ತಿ ಕೊಡಲು ಯೋಚಿಸುತ್ತಿದ್ದೇವೆ. ಐದನೇ ತರಗತಿ ಅಥವಾ ಒಂದನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ಬಹಳಷ್ಟು ಬೇಡಿಕೆ ಇದೆ. ಮಕ್ಕಳು ಶಾಲೆಗೆ ಹೋಗದೇ ತೊಂದರೆಯಾಗ್ತಿದೆ ಎಂದು ಪೋಷಕರಿಗೆ ಅನ್ನಿಸಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಪಂಚಾಯತಿ ಮಟ್ಟಗಳಲ್ಲಿ ಒಳ್ಳೆಯ ಶಾಲೆ

ಪಂಚಾಯತಿ ಮಟ್ಟಗಳಲ್ಲಿ ಒಳ್ಳೆಯ ಶಾಲೆ

ಕಾಡಂಚಿನ ಗ್ರಾಮಗಳಲ್ಲಿ ನಡೆದುಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರುವ ವಿಚಾರ, ಪಂಚಾಯತಿ ಮಟ್ಟಗಳಲ್ಲಿ ಒಳ್ಳೆಯ ಶಾಲೆ ಸ್ಥಾಪನೆಗೆ ಯೋಚನೆ ಮಾಡ್ತಿದೇವೆ. ಒಂದನೇ ತರಗತಿಯಿಂದ ಪಿಯುಸಿವರೆಗೆ ಶಾಲೆ ತೆರೆಯುವ ಕಲ್ಪನೆ ಇದೆ. ಚಾಮರಾಜನಗರದಲ್ಲಿಯೂ ಕಾಡಂಚಿನ ಗ್ರಾಮಗಳ ಶಾಲೆ ವಿದ್ಯಾರ್ಥಿಗಳಿಗೆ ಸಮಸ್ಯೆ ಇತ್ತು,ಅಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇನೆ. ಖಾನಾಪುರದಲ್ಲೂ ಯಾವ ರೀತಿ ಸಮಸ್ಯೆ ಇದೆ ತಿಳಿದು ಸೂಕ್ತ ವ್ಯವಸ್ಥೆ ಮಾಡ್ತೀನಿ. ಎಂದು ಜಾಂಬೋಟಿಯಲ್ಲಿ ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದರು.

English summary
Education Minister Suresh Kumar has hit Maharashtra CM Uddhav Thackeray by visiting and checking Marathi schools across the border. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X